ಪ್ರತಿ ರೈತ ಕುಟುಂಬದ 2 ಲಕ್ಷ ರೂ. ಸಾಲ ಮನ್ನಾ: ಸಿಎಂ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು, ಜು.4: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ 2,18,488 ಕೋಟಿ ರೂ.ಗಾತ್ರದ ಚೊಚ್ಚಲ ಬಜೆಟ್ ಅನ್ನು ಗುರುವಾರ ಮಂಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಿರೀಕ್ಷೆಯಂತೆ ‘ರೈತರ ಬೆಳೆ ಸಾಲ ಮನ್ನಾ’ಗೆ ಆದ್ಯತೆ ನೀಡಿದ್ದು, ಸಾಲ ಮನ್ನಾದ ಮೊತ್ತವನ್ನು ಪ್ರತಿ ರೈತ ಕುಟುಂಬಕ್ಕೆ 2 ಲಕ್ಷ ರೂ.ಗಳಿಗೆ ಮಿತಿಗೊಳಿಸಲು ನಿರ್ಧರಿಸಿದ್ದಾರೆ.
2017ರ ಡಿಸೆಂಬರ್ 31ರವರೆಗೆ ರೈತರು ಮಾಡಿದ ಎಲ್ಲ ಸುಸ್ತಿ ಬೆಳೆ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿರುವ ರೈತರಿಗೆ ಅನುಕೂಲ ಮಾಡಿಕೊಡಲು ಸುಸ್ತಿದಾರರಲ್ಲದ ರೈತರ ಸಾಲ ಖಾತೆಗಳಿಗೆ ಉತ್ತೇಜನಕಾರಿಯಾಗಿ ಪ್ರತಿ ಖಾತೆಗೆ ಅವರು ಮರುಪಾವತಿ ಮಾಡಿರುವ ಸಾಲದ ಮೊತ್ತ ಅಥವಾ 25 ಸಾವಿರ ರೂ.ಗಳಲ್ಲಿ ಯಾವುದು ಕಡಿಮೆಯೋ ಅದನ್ನು ತುಂಬಲು ಸರಕಾರ ನಿರ್ಧರಿಸಿದೆ. ರೈತ ಸಮುದಾಯದ ಅಭಿಪ್ರಾಯದ ಹಿನ್ನೆಲೆಯಲ್ಲಿ ಸಾಲದ ಮೊತ್ತವನ್ನು ಪ್ರತಿ ರೈತ ಕುಟುಂಬಕ್ಕೆ 2 ಲಕ್ಷ ರೂ.ಗಳಿಗೆ ಮಿತಿಗೊಳಿಸಲು ನಿರ್ಧರಿಸಲಾಗಿದ್ದು, ಬೆಳೆ ಸಾಲ ಮನ್ನಾ ಯೋಜನೆಯಿಂದ ಸುಮಾರು 34 ಸಾವಿರ ಕೋಟಿ ರೂ.ಗಳ ಮೊತ್ತದ ಪ್ರಯೋಜನ ರೈತರಿಗೆ ದೊರೆಯಲಿದೆ.
ಸರಕಾರಿ ಅಧಿಕಾರಿಗಳು ಮತ್ತು ಸಹಕಾರಿ ಕ್ಷೇತ್ರದ ಅಧಿಕಾರಿಗಳ ಕುಟುಂಬಗಳು ಹಾಗೂ ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವಂತಹ ರೈತರು ಹಾಗೂ ಇತರೆ ಅನರ್ಹ ಕೃಷಿ ಸಾಲಗಾರರು ಈ ಸಾಲ ಮನ್ನಾ ಯೋಜನೆಯಿಂದ ಹೊರಗೆ ಇರಲಿದ್ದಾರೆ. ಇದಕ್ಕಾಗಿ 2018-19ರ ಬಜೆಟ್‌ನಲ್ಲಿ 6500 ಕೋಟಿ ರೂ.ನಿಗದಿಪಡಿಸಲಾಗಿದೆ. ಇದಲ್ಲದೆ, ಹಿಂದಿನ ಸರಕಾರವು ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿದ ಸುಮಾರು 8165 ಕೋಟಿ ರೂ.ಸಾಲ ಮನ್ನಾ ಮಾಡಿ, ಅದರಲ್ಲಿ 4165 ಕೋಟಿ ರೂ.ಗಳನ್ನು ಹಿಂದಿನ ವರ್ಷ ಬಿಡುಗಡೆ ಮಾಡಲಾಗಿದೆ. ಉಳಿದ 4000 ಕೋಟಿ ರೂ.ಗಳನ್ನು ಪಾವತಿ ಮಾಡಲು ಈ ಸಾಲಿನ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಅನ್ನಭಾಗ್ಯ ಯೋಜನೆಗೆ ಕತ್ತರಿ: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ತಲಾ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಕೆ ಮಾಡಲಾಗಿದೆ. ಅಲ್ಲದೆ, ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಒಂದು ಕೆಜಿ ತೊಗರಿ ಬೆಳೆಯ ಪ್ರಮಾಣವನ್ನು ಅರ್ಧ ಕೆಜಿಗೆ ಇಳಿಸಲಾಗಿದೆ. ಪ್ರತಿ ಬಿಪಿಎಲ್ ಪಡಿತರ ಚೀಟಿಗೆ ಒಂದು ಕೆಜಿ ಪಾಮ್ ಎಣ್ಣೆ, ಒಂದು ಕೆಜಿ ಅಯೋಡಿನ್ ಮತ್ತು ಕಬ್ಬಿಣಾಂಶಯುಕ್ತ ಉಪ್ಪು ಹಾಗೂ 1 ಕೆಜಿ ಸಕ್ಕರೆಯನ್ನು ನೀಡಲು ಉದ್ದೇಶಿಸಲಾಗಿದೆ.
‘ಮುಖ್ಯಮಂತ್ರಿ ಮಾತೃಶ್ರೀ ಯೋಜನೆ’
ಯಡಿ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಹೆರಿಗೆ ಪೂರ್ವದ 3 ತಿಂಗಳು ಹಾಗೂ ಬಾಣಂತಿಯರಿಗೆ ಹೆರಿಗೆ ನಂತರದ 3 ತಿಂಗಳ ಕಾಲ ಮಾಸಿಕ 1 ಸಾವಿರ ರೂ.ಗಳನ್ನು ಅವರ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವುದು. ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ಫಲಾನುಭವಿಗಳು ಪಡೆಯುತ್ತಿರುವ 600 ರೂ.ಗಳ ಮಾಸಾಶನವನ್ನು 1 ಸಾವಿರ ರೂ.ಗಳಿಗೆ ಹೆಚ್ಚಿಸಿದ್ದು, ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಇದರಿಂದ 65 ವರ್ಷ ಮೀರಿದ 32.92 ಲಕ್ಷ ವೃದ್ಧರು ಆರ್ಥಿಕ ಪ್ರಯೋಜನ ಪಡೆಯಲಿದ್ದಾರೆ.
ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ: ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ರೂ., ಆಂಧ್ರಪ್ರದೇಶ ಮಾದರಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಶೂನ್ಯ ಬಂಡವಾಳ ಸಹಜ ಕೃಷಿ ಅಳವಡಿಸಿಕೊಳ್ಳಲು 50 ಕೋಟಿ ರೂ. ಒದಗಿಸಲಾಗಿದೆ.
ಅಂಟುವಾಳ ಕಾಯಿ ಆಧಾರಿತ ಸೋಪು ಮತ್ತು ಡಿಟರ್ಜೆಂಟ್‌ಗಳ ಉತ್ಪಾದನೆಗೆ ಅನುಕೂಲವಾಗುವಂತೆ ಅಂಟುವಾಳ ಕಾಯಿ ಮರಗಳ ವ್ಯಾಪಕ ಬೇಸಾಯಕ್ಕಾಗಿ ಕಾರ್ಯಕ್ರಮ ರೂಪಿಸಲು 10 ಕೋಟಿ ರೂ.ಮೀಸಲಿರಿಸಲಾಗಿದೆ. ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇಸ್ರೇಲ್ ಮಾದರಿ ನೀರಾವರಿ ಒದಗಿಸಲು 150 ಕೋಟಿ ರೂ. ಒದಗಿಸಲಾಗಿದೆ.
ಸಾಮಾಜಿಕ ಉದ್ಯಮಶೀಲತಾ ಯೋಜನೆ: ಎಸ್ಸಿ-ಎಸ್ಟಿ ನಿರುದ್ಯೋಗಿ 5 ಸಾವಿರ ಯುವಕ, ಯುವತಿಯರಿಗೆ ‘ಸಾಮಾಜಿಕ ಉದ್ಯಮಶೀಲತಾ ಯೋಜನೆ’ಯಡಿ ಸರಕಾರಿ ಮತ್ತು ಖಾಸಗಿ ಬ್ರಾಂಡೆಡ್ ಸಂಸ್ಥೆಗಳ ಸಹಯೋಗದೊಂದಿಗೆ ಆದಾಯ ತರುವ ಆರ್ಥಿಕ ಚಟುವಟಿಕೆಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಿಸಲು ಸರಕಾರದಿಂದ ಗರಿಷ್ಠ 10 ಲಕ್ಷ ರೂ.ಆರ್ಥಿಕ ನೆರವು ನೀಡಲಾಗುವುದು. ವಿವಿಧ ಜಿಲ್ಲೆಗಳಲ್ಲಿ ಪ್ರಮುಖ ಕೈಗಾರಿಕಾ, ತಾಂತ್ರಿಕ ಮತ್ತು ಸೇವಾ ಕ್ಷೇತ್ರದ ಸಂಸ್ಥೆಗಳ ಸಹಯೋಗದೊಂದಿಗೆ ಎಸ್ಸಿ-ಎಸ್ಟಿಯ 5 ಸಾವಿರ ನಿರುದ್ಯೋಗಿಗಳಿಗೆ 15 ಕೋಟಿ ರೂ.ವೆಚ್ಚದಲ್ಲಿ ಉದ್ಯೋಗಾಧಾರಿತ ತಾಂತ್ರಿಕ ತರಬೇತಿಗಳನ್ನು ನೀಡಲಾಗುವುದು.
ಪ್ರಗತಿ ಕಾಲನಿ: ಪ್ರಗತಿ ಕಾಲನಿ ಯೋಜನೆ ರೂಪಿಸಿ ಎಸ್ಸಿ-ಎಸ್ಟಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕಾಲನಿ, ತಾಂಡಗಳನ್ನು ಹಂತ ಹಂತವಾಗಿ ಸಮಗ್ರ ಅಭಿವೃದ್ಧಿ ಪಡಿಸಲು ತಲಾ ಕನಿಷ್ಠ 1 ಕೋಟಿ ರೂ.ಗಳಿಂದ ಗರಿಷ್ಠ 5 ಕೋಟಿ ರೂ.ಗಳವರೆಗೆ ಅನುದಾನ ಒದಗಿಸಲಾಗುವುದು.
ರಾಜ್ಯದಲ್ಲಿ ಪ್ರಾಯೋಗಿಕವಾಗಿ ಈ ಸಾಲಿನಲ್ಲಿ ಜಲಕೃಷಿ ವಿಧಾನದಿಂದ ಹಸಿರು ಮೇವು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 3 ಕೋಟಿ ರೂ., ಒಳನಾಡು ಮೀನು ಉತ್ಪಾದನೆಯನ್ನು ಹೆಚ್ಚಿಸಲು ‘ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ’ ಯೋಜನೆಯಡಿ 4 ಕೋಟಿ ರೂ.ವೆಚ್ಚದಲ್ಲಿ 4 ಕೋಟಿ ಮೀನು ಮರಿಗಳನ್ನು ಬಿತ್ತನೆ ಮಾಡಲಾಗುವುದು.
ಕಾಯಕ ಯೋಜನೆ: ಸ್ವ-ಸಹಾಯ ಗುಂಪುಗಳು ಸಮೂಹ ಮಾದರಿಯಲ್ಲಿ ಅಥವಾ ವೈಯಕ್ತಿಕವಾಗಿ ಸ್ವಂತ ಉದ್ಯೋಗ ಕೈಗೊಳ್ಳಲು ಸಹಕಾರ ಸಂಸ್ಥೆಗಳ ಮೂಲಕ ಪ್ರತಿ ಗುಂಪಿಗೆ ಗರಿಷ್ಠ 10 ಲಕ್ಷ ರೂ.ಗಳವರೆಗೆ ಸಾಲ ಒದಗಿಸುವುದು, ‘ಕಾಯಕ’ ಯೋಜನೆಯಡಿ 5 ಲಕ್ಷ ರೂ.ವರೆಗಿನ ಸಾಲಕ್ಕೆ ಶೂನ್ಯ ಬಡ್ಡಿ ಮತ್ತು 5 ಲಕ್ಷದಿಂದ 10 ಲಕ್ಷ ರೂ.ಗಳ ವರೆಗಿನ ಸಾಲಕ್ಕೆ ಶೇ.4ರ ಬಡ್ಡಿದರ ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ಪ್ರಾರಂಭಿಕವಾಗಿ ಒಟ್ಟು 3 ಸಾವಿರ ಸ್ವ ಸಹಾಯ ಗುಂಪುಗಳಿಗೆ ಸಾಲ ಒದಗಿಸಲು 5 ಕೋಟಿ ರೂ.ಅನುದಾನ ಒದಗಿಸಲಾಗಿದೆ.
ಬೀದಿ ವ್ಯಾಪಾರಿಗಳಿಗಾಗಿ ‘ಬಡವರ ಬಂಧು’: ರಾಜ್ಯದ ಐದು ನಗರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ ಸೌಲಭ್ಯ ಒದಗಿಸಲು ‘ಬಡವರ ಬಂಧು’ ಸಂಚಾರಿ ಸೇವೆಯನ್ನು ಪ್ರಾರಂಭಿಸಲಾಗುವುದು. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಭದ್ರತಾ ಸಿಬ್ಬಂದಿಗಳಿಗೆ ಲಕ್ಷಾಂತರ ಭದ್ರತಾ ಸಿಬ್ಬಂದಿಗಳು ದುಡಿಯುತ್ತಿದ್ದು, ಅವರಿಗೆ ಅಗತ್ಯವಾದ ತರಬೇತಿ ನೀಡಲು ‘ತಾಯಿನಾಡು ಭದ್ರತಾ ವಿಶ್ವವಿದ್ಯಾಲಯ’ವನ್ನು ಖಾಸಗಿ ಸಹಭಾಗಿತ್ವ ದೊಂದಿಗೆ ಶಿವಮೊಗ್ಗದಲ್ಲಿ ಆರಂಭಿಸಲು 3 ಕೋಟಿ ರೂ.ಅನುದಾನ ಒದಗಿಸಲಾಗಿದೆ.
ಪೆಟ್ರೋಲ್-ಡಿಸೇಲ್ ದರ ಏರಿಕೆ
ಪೆಟ್ರೋಲ್ ಮೇಲಿನ ತೆರಿಗೆ ದರವನ್ನು ಶೇ.30 ರಿಂದ ಶೇ.32ಕ್ಕೆ ಮತ್ತು ಡಿಸೇಲ್ ಮೇಲಿನ ತೆರಿಗೆ ದರವನ್ನು ಶೇ.19 ರಿಂದ 21ಕ್ಕೆ ಏರಿಸಲು ಉದ್ದೇಶಿಸಿದ್ದು, ಇದರಿಂದ ಒಂದು ಲೀಟರ್ ಪೆಟ್ರೋಲ್ ಮೇಲಿನ ಬೆಲೆಯಲ್ಲಿ 1.14 ರೂ. ಹಾಗೂ ಡಿಸೇಲ್ ಮೇಲಿನ ಬೆಲೆಯಲ್ಲಿ 1.12 ರೂ.ರಷ್ಟು ಏರಿಕೆಯಾಗಲಿದೆ.ವಿದ್ಯುತ್ ದರ ಹೆಚ್ಚಳ
ವಿದ್ಯುತ್ ಬಳಕೆ ಮೇಲಿನ ತೆರಿಗೆಯನ್ನು ಚಾಲ್ತಿಯಲ್ಲಿರುವ ಶೇ.6 ರಿಂದ ಶೇ.9ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಹಾಗೆಯೇ, ಸ್ವಂತ ಬಳಕೆಯ ವಿದ್ಯುತ್ ಮೇಲಿನ ತೆರಿಗೆ ದರವನ್ನು ಪ್ರತಿ ಯೂನಿಟ್ ದರವನ್ನು 10 ಪೈಸೆಯಿಂದ 20 ಪೈಸೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.







