ಅತ್ಯಾಚಾರ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಪ್ರತಿಭಾ ಕುಳಾಯಿ ಆಗ್ರಹ
ಮಂಗಳೂರು, ಜು. 5: ಮಧ್ಯಪ್ರದೇಶದ ಮಾಂಡ್‌ಸರ್‌ನಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಗಂಭೀರವಾಗಿ ಮತ್ತು ವಿಶೇಷ ಪ್ರಕರಣವೆಂದು ಪರಿಗಣಿಸುವ ಮೂಲಕ ಸರಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಸರಕಾರವನ್ನು ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬಾರದು. ಹಾಗೆ ಆದರೆ ಒಮ್ಮೆಲೇ ಸಾವು ಬಂದಂತಾಗುತ್ತದೆ. ಜೈಲಿನಲ್ಲಿಯೇ ಇದ್ದು ನರಳಿ ನರಳಿ ಸಾಯುವಂತಾಗಬೇಕು. ಆ ಮೂಲಕ ಅತ್ಯಾಚಾರಿಗಳಿಗೆ ಪಾಠವಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಈಗಾಗಲೇ ಹಲವು ಮಹಿಳೆ, ಬಾಲಕಿಯರ ಮೇಲೆ ದೌರ್ಜನ್ಯ ಅತ್ಯಾಚಾರಗಳಾಗಿವೆ. ಆದರೆ ಅದಕ್ಕೆ ಒಂದು ಅಂತ್ಯವೆಂದು ಸಿಕ್ಕಿಲ್ಲ. ಪ್ರತಿಭಟನೆಗಳು ಮಾಡಿ ಸುಮ್ಮನಿರುವುದು ಸರಿಯಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವವರೆಗೆ ಹೋರಾಟ ನಡೆಯಬೇಕು. ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಲ್ಲೇ ಆಗಲಿ ತಾನು ನೊಂದವರ ಪರ ಧ್ವನಿಯೆತ್ತುವುದಾಗಿ ಪ್ರತಿಭಾ ಕುಳಾಯಿ ಹೇಳಿದರು.
ಬಾಲಕಿಯ ಪ್ರಕರಣವನ್ನು ಖಂಡಿಸಿ ಜು.7ರಂದು ಸುರತ್ಕಲ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅಮಾನವೀಯ ಕೃತ್ಯಗಳು ಘಟಿಸಿದ ತಕ್ಷಣ ಆರೋಪಿಗಳನ್ನು ಪತ್ತೆ ಹಚ್ಚಿ ಅತಿ ಶೀಘ್ರವಾಗಿ ಶಿಕ್ಷೆ ವಿಧಿಸುವಂತಾಗಬೇಕು. ನ್ಯಾಯದಾನದಲ್ಲಿ ವಿಳಂಬ ಸಲ್ಲದು. ಇಂತಹ ಅಮಾನವೀಯ ಕೃತ್ಯಗಳು ನಡೆದಾಗ ಇದರ ನಡುವೆ ಧರ್ಮವನ್ನು ಎಳೆತರಬಾರದು. ಜಾತಿ ಧರ್ಮ ಬದಿಗಿಟ್ಟು ಮಾನವೀಯ ನೆಲೆಯಲ್ಲಿ ಪ್ರತಿಯೊಬ್ಬರೂ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಒತ್ತಡ ತರಬೇಕು ಎಂದವರು ಹೇಳಿದರು.
ಮಾನಹಾನಿ ವಿರುದ್ಧ ಕೇಸ್
ತನ್ನ ಮೇಲೆ ಸಾಮಾಜಿಕ ಜಾಲತಾಣದ ಮೂಲಕ ಮಾನಹಾನಿ ಮಾಡುವ ಕೆಲಸ ಆಗುತ್ತಿದೆ. ಆದರೆ ಈ ಬಾರಿ ಸುಮ್ಮನಿರುವುದಿಲ್ಲ. ಫೇಸ್‌ಬುಕ್‌ನಲ್ಲಿ ಮಾನಹಾನಿ ಮಾಡುವ ಪ್ರಯತ್ನ ಮತ್ತೆ ಮುಂದುವರಿದಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸುತ್ತಿರುವುದಾಗಿ ಪ್ರತಿಭಾ ಕುಳಾಯಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗುಲ್ಝಾರ್ ಭಾನು, ಕಾಂಗ್ರೆಸ್ ಸುರತ್ಕಲ್ ವಲಯದ ಸುನಿತಾ ಡಿಸೋಜ ಉಪಸ್ಥಿತರಿದ್ದರು.







