ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ಐವರ ಹತ್ಯೆ: ಪ್ರಮುಖ ಆರೋಪಿಯ ಬಂಧನ

ಧುಲೆ (ಮಹಾರಾಷ್ಟ್ರ), ಜು.5: ಧುಲೆ ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಎಂಬ ಸಂಶಯದಲ್ಲಿ ಐವರ ಮೇಲೆ ಸಾಮೂಹಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನ ಆರೋಪಿ 22ರ ಹರೆಯದ ಮಹರು ಪವಾರ್‌ನನ್ನು ಸಮೀಪದ ನಂದುರ್ಬರ್ ಜಿಲ್ಲೆಯಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಮಕುಮಾರ್ ತಿಳಿಸಿದ್ದಾರೆ. ಘಟನೆ ನಡೆದ ದಿನದಿಂದ ಮಹರು ಪವಾರ್ ತಲೆಮರೆಸಿಕೊಂಡಿದ್ದ. ನಮ್ಮ ತಂಡ ಆತನನ್ನು ಸಮೀಪದ ಜಿಲ್ಲೆಯಲ್ಲಿ ಪತ್ತೆಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಘಟನೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅದರಲ್ಲಿ ಐವರು ಅಲೆಮಾರಿಗಳ ಮೇಲೆ ಹಲ್ಲೆ ನಡೆಸಿದ ಗುಂಪನ್ನು ಮಹರು ಪವಾರ್ ಮುನ್ನಡೆಸುತ್ತಿರುವುದು ಕಂಡುಬಂದಿದೆ.
ಇದರೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಬಂಧಿಸಲ್ಪಟ್ಟವರ ಸಂಖ್ಯೆ ಇಪ್ಪತ್ತನಾಲ್ಕಕ್ಕೆ ತಲುಪಿದೆ.
ಜುಲೈ ಒಂದರಂದು ಮಹಾರಾಷ್ಟರದ ಧುಲೆ ಜಿಲ್ಲೆಯ ರೈನ್‌ಪಾಡ ಗ್ರಾಮದಲ್ಲಿ ಅಲೆಮಾರಿ ಸಮುದಾಯದ ಐದು ಮಂದಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಸಾಮೂಹಿಕ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಆಹಾರ ಬೇಡಿಕೊಂಡು ಬಂದಿದ್ದ ಈ ಮಂದಿಯನ್ನು ಸ್ಥಳೀಯರು ಮಕ್ಕಳ ಕಳ್ಳರು ಎಂದು ಅನುಮಾನಿಸಿದ್ದೇ ಘಟನೆಗೆ ಕಾರಣವಾಗಿತ್ತು.





