ದ.ಕ.ಜಿಲ್ಲೆ: ಮಣ್ಣಿನ ಗೋಡೆಗಳ 150 ಸರಕಾರಿ ಶಾಲಾ ಕಟ್ಟಡಗಳಿಗೆ ‘ಕೆಂಪು ಕಲ್ಲಿನ ಕಟ್ಟಡ’ ಭಾಗ್ಯ

ಮಂಗಳೂರು, ಜು.5: ದ.ಕ.ಜಿಲ್ಲೆಯಲ್ಲಿ ಮಣ್ಣಿನ ಗೋಡೆಗಳ ಸುಮಾರು 150 ಸರಕಾರಿ ಶಾಲಾ ಕಟ್ಟಡಗಳನ್ನು ಗುರುತಿಸಿರುವ ಶಿಕ್ಷಣ ಇಲಾಖೆಯು ಅವುಗಳ ಗುಣಮಟ್ಟದ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಯಿಂದ ವರದಿ ತಯಾರಿಸಲು ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲ, ವರದಿ ಬಂದೊಡನೆ ಆ ಶಾಲೆಗಳನ್ನು ನೆಲಸಮ ಮಾಡಿ ‘ಕೆಂಪು ಕಲ್ಲಿನ ಕಟ್ಟಡ’ದ ಭಾಗ್ಯ ಕಲ್ಪಿಸಲು ಇಲಾಖೆಯು ಮುಂದಾಗಿದೆ. ಅಂದಹಾಗೆ, ಈ ಮಣ್ಣಿನ ಗೋಡೆಗಳ ಶಾಲೆಗಳ ಪೈಕಿ ಶತಮಾನ ಪೂರೈಸಿದ ಶಾಲಾ ಕಟ್ಟಡಗಳೂ ಇವೆ.
ಅದಲ್ಲದೆ ಜಿಲ್ಲೆಯಲ್ಲಿ ಇತರ 33 ಶಾಲಾ ಕಟ್ಟಡಗಳು ಕೂಡಾ ಕುಸಿಯುವ ಹಂತ ತಲುಪಿವೆ. ಅವುಗಳ ದುರಸ್ತಿಯ ಬದಲು ನೆಲಸಮ ಮಾಡುವುದು ಅನಿವಾರ್ಯ ಎಂಬ ವ್ಯಕ್ತವಾದ ಹಿನ್ನೆಲೆಯಲ್ಲಿ ಮಣ್ಣಿನ ಗೋಡೆಯ ಶಾಲೆಗಳ ಸಹಿತ ಕೆಡವಿದ ಇತರ 33 ಶಾಲಾ ಕಟ್ಟಡಗಳನ್ನು ನಿರ್ಮಿಸಲು ಇಲಾಖೆಯು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿರುವ ಡಿಡಿಪಿಐ ಶಿವರಾಮಯ್ಯ ಮಣ್ಣಿನ ಗೋಡೆಗಳ ಶಾಲಾ ಕಟ್ಟಡವು ಶಿಥಿಲಾವಸ್ಥೆಯಲ್ಲಿತ್ತು. ಅವುಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸಲು ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಕ ವರ್ಗ, ಶಾಲಾ ಶಿಕ್ಷಕ-ರಕ್ಷಕ ಸಂಘದ ಪ್ರತಿನಿಧಿಗಳು ಮನವಿ ಮಾಡುತ್ತಲೇ ಇದ್ದರು. ಅದರಂತೆ ಇಲಾಖೆಯು ಸಮೀಕ್ಷೆ ನಡೆಸಿದಾಗ ಮಣ್ಣಿನ ಗೋಡೆಗಳ 150 ಸರಕಾರಿ ಶಾಲಾ ಕಟ್ಟಡವನ್ನು ಗುರುತಿಸಲಾಗಿದೆ. ಅದಲ್ಲದೆ ಕಲ್ಲಿನಿಂದಲೇ ಕೂಡಿದ ಇತರ ಹಳೆಯ 33 ಶಾಲಾ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವುದು ಕಂಡು ಬಂದಿದೆ. ಈ ಬಗ್ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಈ ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಪರಿಶೀಲನೆಗೊಳಪಡಿಸಿ ತಾಂತ್ರಿಕ ವರದಿಯನ್ನು ತಯಾರಿಸಲು ಸೂಚನೆ ನೀಡಿದೆ. ಅದರಂತೆ ಶಿಕ್ಷಣ ಇಲಾಖೆಯು ಕ್ರಮ ವಹಿಸಲು ಆರಂಭಿಸಿದೆ’ ಎಂದಿದ್ದಾರೆ.
ಮಂಗಳೂರು ಉತ್ತರದ 8 ಶಾಲೆಗಳಲ್ಲಿ 32 ಕೊಠಡಿ, ಮಂಗಳೂರು ದಕ್ಷಿಣದ 3 ಶಾಲೆಗಳಲ್ಲಿ 19 ಕೊಠಡಿ, ಮೂಡುಬಿದಿರೆ ವಲಯದ 16 ಶಾಲೆಗಳಲ್ಲಿ 42 ಕೊಠಡಿ, ಬಂಟ್ವಾಳ ವಲಯದ 22 ಶಾಲೆಗಳಲ್ಲಿ 71 ಕೊಠಡಿ, ಬೆಳ್ತಂಗಡಿ ವಲಯದ 78 ಶಾಲೆಗಳಲ್ಲಿ 240 ಕೊಠಡಿ, ಪುತ್ತೂರು ವಲಯದ 12 ಶಾಲೆಗಳಲ್ಲಿ 37 ಕೊಠಡಿ, ಸುಳ್ಯದ 11 ಶಾಲೆಗಳಲ್ಲಿ 39 ಕೊಠಡಿಗಳ ಸಹಿತ ದ.ಕ.ಜಿಲ್ಲೆಯಲ್ಲಿ 7 ಶೈಕ್ಷಣಿಕ ವಲಯಗಳ 150 ಮಣ್ಣಿನ ಗೋಡೆಗಳ ಶಾಲೆಗಳಲ್ಲಿ ಒಟ್ಟು 480 ಕೊಠಡಿಗಳಿವೆ. ಇವುಗಳ ಬಗ್ಗೆ ಬಂದ ವರದಿಯ ಆಧಾರದ ಮೇಲೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ನೋಡಿಕೊಳ್ಳಲು ಇಲಾಖೆ ಮುಂದಾಗಿದೆ.
ಇನ್ನು ಶಾಲಾ ಕಟ್ಟಡದಂತೆ ಮಣ್ಣಿನ ಗೋಡೆಯಲ್ಲಿ ನಿರ್ಮಿಸಲಾದ ಶಾಲಾವರಣದ ಶೌಚಾಲಯ ಕೂಡಾ ಇದ್ದು, ಅವುಗಳನ್ನೂ ಕೆಡವಿ ಹೊಸತನ್ನು ನಿರ್ಮಿಸುವ ಬಗ್ಗೆ ಪಟ್ಟಿ ತಯಾರಿಸುವಂತೆ ಜಿಪಂ ಸದಸ್ಯರ ಆಗ್ರಹದ ಮೇರೆಗೆ ಜಿಪಂ ಸಿಇಒ ಸೂಚಿಸಿದ್ದು, ಇಲಾಖೆಯು ಶಿಥಿಲಾವಸ್ಥೆಗೆ ತಲುಪಿರುವ ಶೌಚಾಲಯಗಳ ಸಮೀಕ್ಷೆಗೆ ಮುಂದಾಗಿವೆ.







