ವಿದ್ಯಾರ್ಥಿಗಳು ವೈದ್ಯಕೀಯ ಸಾಮಾನ್ಯ ಜ್ಞಾನವನ್ನು ಅಳವಡಿಸಿಕೊಳ್ಳಬೇಕು: ಡಾ. ಸುಧಾಕರ್
ಅಪಘಾತದ ಸಂದರ್ಭ ಮೂಲಭೂತ ಜೀವ ರಕ್ಷಣೆ ಕುರಿತು ಕಾರ್ಯಗಾರ

ಮಂಗಳೂರು, ಜು.5: ರಸ್ತೆ ಅಪಘಾತ, ವಿದ್ಯುತ್ ಅವಘಡ, ಸಿಡಿಲು ಆಘಾತ, ಜಲಪ್ರಳಯ ದುರಂತ, ಅಗ್ನಿ ದುರಂತ, ಹಾವು ಕಡಿತ, ಮರ/ಮಹಡಿಯಿಂದ ಜಾರಿ ಬಿದ್ದಾಗ, ಗಂಟಲಲ್ಲಿ ಆಹಾರ ಪದಾರ್ಥ ಸಿಲುಕಿಕೊಂಡ ಸಂದರ್ಭ ಸಂಭಾವ್ಯ ಹೃದಯಘಾತ, ಉಸಿರಾಟದ ಸಮಸ್ಯೆ, ನಾಡಿ ಮಿಡಿತ ಸ್ಥಗಿತಗೊಂಡ ಮೂರ್ಛಾವಸ್ಥೆಗೆ ಬಿದ್ದು ಗಂಭೀರ, ಜೀವನ್ಮರಣ ಚಿಂತಾನಕ ಪರಿಸ್ಥಿತಿಯಲ್ಲಿ ಜೀವಕ್ಕೆ ಅಪಾಯ ಸಂಭವಿಸಿದಾಗ ಮೂಲಭೂತ ಜೀವರಕ್ಷಣೆ ಬಗ್ಗೆ ಮಾಹಿತಿ ತಿಳಿದುಕೊಂಡಿರಬೇಕು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಕೀಲು, ಮೂಳೆಶಾಸ್ತ್ರ ತಜ್ಞ ಡಾ. ಸುಧಾಕರ್ ಹೇಳಿದರು.
ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಸಮಾಜದ ಆರೋಗ್ಯ ಮತ್ತು ಆರೈಕೆ ಸೇವೆಯ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ಆಕಸ್ಮಿಕ ಅಪಘಾತದ ಸಂದರ್ಭ ಮೂಲಭೂತ ಜೀವ ರಕ್ಷಣೆಯ ವಿಧಿ ವಿಧಾನದ ಬಗ್ಗೆ ನಗರದ ಕೆನರಾ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ವೈದ್ಯಕೀಯ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಡಾ. ರಂಜನ್ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿ ವೈದ್ಯಕೀಯ ಕಾಲೇಜಿನ ಹಿರಿಯ ಅರಿವಳಿಕೆ ಶಾಸ್ತ್ರತಜ್ಞ ಡಾ. ರಂಜನ್, ಕಣಚೂರು ವೈದ್ಯಕೀಯ ಕಾಲೇಜಿನ ಸಿಇಒ ಡಾ. ರೋಹನ್ ಮೊನಿಸ್ ವಿವಿಧ ವಿಷಯಗಳಿಗೆ ಸಂಬಂಧಿಸಿ ಮಾತನಾಡಿದರು.
ವೇದಿಕೆಯಲ್ಲಿ ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ದೇಜಮ್ಮ, ವಿಂಧ್ಯಾ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ರೈ, ರೋಟರಿಯ ದಂಡಾಧಿಕಾರಿ ಶೈಲೇಂದ್ರ ಪೈ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಸ್ವಯಂ ಸೇವಕಿ ಬಿಂದಿಯಾ ಸ್ವಾಗತಿಸಿದರು. ಶರಣ್ಯಾ ವಂದಿಸಿದರು.







