ಬಾಂಗ್ಲಾ ನಿರಾಶ್ರಿತ ಶಿಬಿರಗಳಲ್ಲಿ ಸಮುದಾಯ ನಾಯಕರ ಹತ್ಯೆ: ಸಾವಿರಾರು ಹೆಚ್ಚುವರಿ ಪೊಲೀಸರ ನಿಯೋಜನೆ

ಢಾಕಾ (ಬಾಂಗ್ಲಾದೇಶ), ಜು. 5: ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿರುವ ರೊಹಿಂಗ್ಯಾ ನಿರಾಶ್ರಿತ ಶಿಬಿರಗಳಿಗೆ ಸಾವಿರಾರು ಹೆಚ್ಚುವರಿ ಪೊಲೀಸರನ್ನು ಸರಕಾರ ನಿಯೋಜಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಿಬಿರಗಳಲ್ಲಿ ನಿಗೂಢ ಸರಣಿ ಹತ್ಯೆಗಳು ನಡೆದಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಈ ನಿಗೂಢ ಹತ್ಯೆಗಳಿಂದಾಗಿ ಶಿಬಿರಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರು ಭಯಭೀತರಾಗಿದ್ದಾರೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಸೇನೆ ದಮನ ಕಾರ್ಯಾಚರಣೆ ಆರಂಭಿಸಿತ್ತು. ಅಂದಿನಿಂದ ಬಾಂಗ್ಲಾದೇಶದ ರೊಹಿಂಗ್ಯಾ ಶಿಬಿರಗಳಲ್ಲಿ 19 ಮಂದಿಯನ್ನು ಹತ್ಯೆ ಮಾಡಲಾಗಿದೆ. ಅವರ ಪೈಕಿ ಕೆಲವರು ಸಮುದಾಯ ನಾಯಕರು.
ಕೆಲವು ಕೊಲೆಗಳಿಗೆ ಸಂಬಂಧಿಸಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಆದರೆ, ಕೊಲೆಗಳ ಉದ್ದೇಶವೇನೆಂದು ಸ್ಪಷ್ಟವಾಗಿಲ್ಲ.
ಕಳೆದ ವರ್ಷದ ಆಗಸ್ಟ್‌ನಿಂದ ಕಾಕ್ಸ್‌ಬಝಾರ್‌ನಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿ 7 ಲಕ್ಷಕ್ಕಿಂತಲೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಆಶ್ರಯ ಪಡೆದಿದ್ದಾರೆ.
ಅಲ್ಲಿ ಕಳೆದ ತಿಂಗಳು 35 ವರ್ಷದ ಅರೀಫುಲ್ಲಾ ಎಂಬ ನಿರಾಶ್ರಿತನನ್ನು ಇರಿದು ಕೊಲ್ಲಲಾಗಿತ್ತು. ಅವರು ಅಲ್ಲಿ 1,000 ಮಂದಿಗೆ ಸಮುದಾಯ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು.







