ನಾನೂ ದಲಿತ ನೌಕರರಂತೆ, ದಲಿತ ಉಪಮುಖ್ಯಮಂತ್ರಿ: ಡಾ. ಜಿ.ಪರಮೇಶ್ವರ್

ಬೆಂಗಳೂರು, ಜು.5: ದಲಿತ ಮುಖ್ಯಮಂತ್ರಿ ಅಂತಾರೆಯೇ ಹೊರತು ನಮ್ಮನ್ನೂ ಮುಖ್ಯಮಂತ್ರಿ ಅನ್ನೋದಿಲ್ಲ. ಇದೀಗ ದಲಿತ ಉಪಮುಖ್ಯಮಂತ್ರಿ ಅಂತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಗುರುವಾರ ಇಲ್ಲಿನ ಖಾಸಗಿ ಹೊಟೇಲ್ ನಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬಿ. ಬಸವಲಿಂಗಪ್ಪ, ಕೆ.ಎಚ್. ರಂಗನಾಥ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿಲ್ಲ. ಮಲ್ಲಿಕಾರ್ಜುನ ಖರ್ಗೆ ನಾನು ಕಂಡ ಅಪ್ರತಿಮ ನಾಯಕ. ನಾನು ವಿದ್ಯಾರ್ಥಿ ದೆಸೆಯಿಂದಲೂ ಖರ್ಗೆಯನ್ನ ನೋಡಿದ್ದೇನೆ. ಅಂಥ ಧೀಮಂತ ನಾಯಕ ಖರ್ಗೆ ಅವರು ಡಿಸಿಎಂ ಕೂಡ ಆಗಲಿಲ್ಲ. ಯಾರು ಮಾಡಿದ ಪುಣ್ಯವೊ ಇಂದು ನಾನು ಡಿಸಿಎಂ ಆಗಿದ್ದೇನೆ. ಆದರೆ ನನ್ನ ಪರಿಸ್ಥಿತಿ ಕೂಡ ದಲಿತ ನೌಕರರ ರೀತಿಯೇ ಆಗಿದೆ. ಇನ್ನೂ ಪ್ರಮೋಷನ್ ಆಗಿಲ್ಲ. ನಿಮಗಾದ್ರೆ ಕಾನೂನಿದೆ, ನನಗೆ ಯಾವುದಿದೆ? ಎಂದು ಅಲವತ್ತು ಕೊಂಡರು.
ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ವಿಚಾರದಲ್ಲಿ ಯಾವುದೇ ಡಿಕ್ರಿ, ಆದೇಶ ಹೊರಡಿಸಲು ಆಗುವುದಿಲ್ಲ ಎಂದು ಕಾಯ್ದೆಯಲ್ಲಿ ಖಚಿತವಾಗಿ ಹೇಳಲಾಗಿದೆ ಎಂದ ಅವರು, ನ್ಯಾಯಾಲಯ ಮಧ್ಯ ಬರುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಶೀಘ್ರದಲ್ಲೇ ಭಡ್ತಿ ಮೀಸಲಾತಿ ಬಗ್ಗೆ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ರಾಷ್ಟ್ರಪತಿಗಳ ಸಹಿ ಹಾಕಿದ್ದರೂ, ಅದು ಜಾರಿಗೆ ಬಂದಿಲ್ಲ. ಯಾವುದೇ ಕಾರಣಕ್ಕೂ ಹಿಂಭಡ್ತಿ ಆಗುವುದಕ್ಕೆ ಬಿಡುವುದಿಲ್ಲ ಎಂದು ದಲಿತ ನೌಕರರಿಗೆ ಅಭಯ ನೀಡಿದರು. ಸುಪ್ರೀಂ ಕೋರ್ಟ್ ಆದೇಶ ಆದಷ್ಟು ಬೇಗ ಪಾಲಿಸಬೇಕಿದೆ. ಗೆಜೆಟ್ ನೋಟಿಫಿಕೇಷನ್ ಮಾಡಬೇಕಿದೆ. ನಾವು ಎಂದೂ ಇಂಥ ವಿಚಾರದಲ್ಲಿ ಎದೆಗುಂದುವುದಿಲ್ಲ. ದಲಿತ ನೌಕರರು ಯಾರೂ ಎದೆಗುಂದುವುದು ಬೇಡ ಎಂದರು.
ಹಳ್ಳಿಗಾಡಿನಲ್ಲಿ ಪರಿಶಿಷ್ಟ ಜಾತಿ, ವರ್ಗದ ಪರಿಸ್ಥಿತಿ ಕಷ್ಟ ಇದೆ. ಇಂದಿಗೂ ದಲಿತರಿಗೆ ದೇವಸ್ಥಾನಗಳಿಗೆ ಸೇರಿಸುವುದಿಲ್ಲ. ನಮ್ಮ ಸರಕಾರದಲ್ಲಿರುವ ನಾವೂ ಬಹಳ ಬುದ್ದಿವಂತರು. ಎಸ್ಸಿ, ಎಸ್ಟಿ ಸಮುದಾಯದವರಿಗೆ ವಸತಿ ಸಮುಚ್ಚಯ ಮಾಡಿದರು ಊರ ಹೊರಗೆ ಮಾಡ್ತೀವಿ. ಆದ್ದರಿಂದ ಮೊದಲು ನಮ್ಮ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಬೇಕು. ನಮ್ಮ ಮಕ್ಕಳನ್ನು ಐಎಎಸ್, ಐಪಿಎಸ್ ಮಾಡಬೇಕು. ಆ ಮೂಲಕ ಆಡಳಿತ ಯಂತ್ರದ ಚುಕ್ಕಾಣಿ ಹಿಡಿಯುವ ಕೆಲಸ ಮಾಡಬೇಕು ಎಂದು ಪರಮೇಶ್ವರ್ ಹೇಳಿದರು.
ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಮಹೇಶ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಅನ್ನದಾನಿ ಸೇರಿ ಇನ್ನಿತರರು ಇದ್ದರು.







