ಚಿತ್ರ ಸಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲಿ: ಡಾ.ಜಿ. ಪರಮೇಶ್ವರ್

ಬೆಂಗಳೂರು, ಜು.5: ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಚಿತ್ರ ಸಂತೆ ಅಂತಾರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಸ್ಥಾನ ಪಡೆಯುವಂತೆ ಖ್ಯಾತಿಗಳಿಸಬೇಕೆಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಹಾಗೂ ಚಿತ್ರಕಲಾ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪ್ರೊ. ಎಂ.ಎಸ್.ನಂಜುಂಡರಾವ್-86 ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಚಿತ್ರಕಲಾ ಪರಿಷತ್ತು ಸಾಕಷ್ಟು ಕಲಾವಿದರನ್ನು ಹುಟ್ಟು ಹಾಕಿದೆ. ಇಲ್ಲಿನ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುವಂತಾಗಬೇಕು ಎಂದರು.
ನಮ್ಮ ಸಂಸ್ಕೃತಿ, ಇತಿಹಾಸ, ನಾಗರಿಕತೆಯನ್ನು ಚಿತ್ರಗಳು ಪ್ರತಿಬಿಂಬಿಸುತ್ತವೆ. ಚಿತ್ರ,ಮೂರ್ತಿಗಳು ದೊಡ್ಡ ಕತೆಗಳನ್ನು ಹೇಳುತ್ತವೆ. ಅದನ್ನು ಉಳಿಸಿಕೊಂಡು ಹೋಗಲು ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮ ಜವಾಬ್ಧಾರಿ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ, ಚಿತ್ರಕಲೆ ಸಮಾಜವನ್ನು ಪ್ರತಿನಿಧಿಸುವ ಕಲೆ ಹಿಂದಿನಿಂದಲೂ ರೂಢಿಯಲ್ಲಿದೆ. ಇದನ್ನು ರಕ್ಷಿಸಬೇಕು ಎಂದ ಅವರು, ಹಿಂದಿನ ಸರಕಾರ ಚಿತ್ರಕಲಾ ಪರಿಷತ್‌ನ ನೂತನ ಕ್ಯಾಂಪಸ್‌ಗೆ 20 ಕೋಟಿ ರೂ.ಅನುದಾನ ನೀಡಿತ್ತು. ಈ ಸರಕಾರದಿಂದಲೂ ಇನ್ನಷ್ಟು ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ನಂಜುಂಡರಾಯರು ನಮ್ಮ ಊರಿನವರೆ. ನನ್ನ ತಂದೆಗೆ ಆತ್ಮೀಯರು. ನನ್ನ ತಂದೆ ಕೂಡ ಚಿತ್ರಗಾರರು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಚಿತ್ರಕಲಾ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಮಾಡಲು ನನ್ನೊಂದಿಗೆ ಚರ್ಚೆ ಮಾಡಿದ್ದರು. ಯೂನಿವರ್ಸಿಟಿ ಆಗಲು ಆಗಲೇ ಪ್ರಸ್ತಾವನೆ ಇಟ್ಟಿದ್ದರು. ಆದರೆ ಸಾಧ್ಯವಾಗಲಿಲ್ಲ. ಈಗಿನ ಹೊಸ ಕ್ಯಾಂಪಸ್ ಉತ್ತಮವಾಗಿ ಮೂಡಿ ಬಂದಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ದೇವರಾಜ್ ದಕ್ಕೋಜಿ ಅವರಿಗೆ ಪ್ರೊ.ಎಂ.ಎಸ್. ನಂಜುಂಡರಾವ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್. ಶಂಕರ್, ಪ್ರಧಾನ ಕಾರ್ಯದರ್ಶಿ ಎಂ.ಜೆ.ಕಮಲಾಕ್ಷಿ ಸೇರಿ ಪ್ರಮುಖರಿದ್ದರು.







