ಮೂಡಿಗೆರೆ: ದಾರುಲ್ ಹಿದಾಯ ಶರೀಅತ್ ಮಹಿಳಾ ಕಾಲೇಜು ಉದ್ಘಾಟನೆ

ಮೂಡಿಗೆರೆ, ಜು.5: ಮಹಿಳೆಯರು ಧಾರ್ಮಿಕ ಮತ್ತು ಲೌಕಿಕ ಜಗತ್ತಿನಲ್ಲಿ ಸ್ವಾವಲಂಬಿಗಳಾಗಿ ಬದುಕಲು ಉನ್ನತ ಮಟ್ಟದ ಶಿಕ್ಷಣದ ಅಗತ್ಯವಿದೆ ಎಂದು ಸಂಯುಕ್ತ ಜಮಾಅತ್‍ನ ಎಂ.ಎಂ.ಖಾಸಿಂ ಮುಸ್ಲಿಯಾರ್ ಹೇಳಿದರು.
ಗುರುವಾರ ಪಟ್ಟಣದ ಬದ್ರಿಯಾ ಮಸೀದಿ ಕಟ್ಟಡದಲ್ಲಿ ನೂತನವಾಗಿ ಪ್ರಾರಂಭಿಸಿರುವ ದಾರುಲ್ ಹಿದಾಯ ಶರೀಅತ್ ಮಹಿಳಾ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, ಮುಸ್ಲಿಂ ಮಹಿಳೆಯರಿಗೆ ಧಾರ್ಮಿಕ ಚೌಕಟ್ಟಿನೊಳಗೆ ದೊಡ್ಡ ಸ್ವಾತಂತ್ರ್ಯವಿದೆ. ಶಾಲಾ ಕಾಲೇಜಿನಲ್ಲಿ ಧಾರ್ಮಿಕ ಶಿಕ್ಷಣ ಪಡೆಯಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಲೌಕಿಕ ಶಿಕ್ಷಣಕ್ಕಾಗಿ ಉತ್ತಮವಾದ ಕಾಲೇಜುಗಳನ್ನು ಪ್ರವೇಶಿಸಿ ಉನ್ನತ ಸ್ಥಾನಮಾನಗಳನ್ನು ಸಂಪಾದಿಸಿರುವ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ಅಂತೆಯೇ ಧಾರ್ಮಿಕ ಶಿಕ್ಷಣದಲ್ಲಿ ಮಹಿಳೆಯರು ಹಿಂದುಳಿಯ ಬಾರದೆಂಬ ಕಾರಣಕ್ಕೆ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲೂ ಶರೀಅತ್ ಮಹಿಳಾ ಕಾಲೇಜುಗಳನ್ನು ಆರಂಭಿಸಿ ಮಹಿಳೆಯರ ಧಾಮಿಕ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ಬದ್ರಿಯಾ ಮಸೀದಿಯ ಖತೀಬ್ ಹಾಗೂ ಪ್ರಾಂಶುಪಾಲ ಯಾಕೂಬ್ ದಾರಿಮಿ ಮಾತನಾಡಿ, ಜಗತ್ತು ಆಧುನಿಕತೆಯೆಡೆಗೆ ದಾಪುಗಾಲಿಡುತ್ತಿದ್ದು, ಇದಕ್ಕೆ ತಕ್ಕಂತೆ ಶೈಕ್ಷಣಿಕ ಗುಣಮಟ್ಟ ಉನ್ನತ ಸ್ಥಾನದಲ್ಲಿರಬೇಕೆಂದು ಜನತೆ ಬಯಸುತ್ತಾರೆ. ಶಿಕ್ಷಣ ವಂಚಿತರು ಸಮಾಜದಲ್ಲಿ ತಿರಸ್ಕಾರಕ್ಕೊಳಗಾಗಿ ಮೂಲೆಗುಂಪಾಗುತ್ತಾರೆ. ಹೀಗಾಗಿ ಮಹಿಳೆಯರು, ಮಕ್ಕಳು ಎಲ್ಲರಿಗೂ ಎಲ್ಲ ಬಗೆಯ ಶಿಕ್ಷಣ ಪಡೆಯಲು ಹಲವು ದಾರಿಗಳಿವೆ. ಈ ದಾರಿಗಳ ಬಗ್ಗೆ ತಿಳಿದು ಆಧುನಿಕತೆಗೆ ತಕ್ಕಂತೆ ಧಾರ್ಮಿಕ, ಲೌಕಿಕ ಶಿಕ್ಷಣ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬದ್ರಿಯಾ ಮಸೀದಿ ಅಧ್ಯಕ್ಷ ಸಿ.ಕೆ.ಇಬ್ರಾಹೀಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಸೀದಿ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಹಾಜಬ್ಬ, ಕಾರ್ಯದರ್ಶಿ ಶರೀಫ್ ಯಾದ್‍ಗರ್ ಇಬ್ರಾಹೀಂ, ಮಾಜಿ ಅಧ್ಯಕ್ಷ ಎಂ.ಎ.ಹಮ್ಮಬ್ಬ, ಉದ್ಯಮಿ ಅಕ್ರಂ ಹಾಜಿ, ಕಿರುಗುಂದ ಅಬ್ಬಾಸ್, ಯಾಕೂಬ್ ಫೈಝಿ, ಶಂಸುದ್ದೀನ್, ಎಂ.ಎಸ್.ಇಬ್ರಾಹಿಂ ಮುಸ್ಲಿಯಾರ್, ಅಬ್ದುಲ್ ಖಾದರ್, ಇಬ್ರಾಹೀಂ, ಮೊಹಿದ್ದೀನ್, ಇಸ್ಮಾಯಿಲ್, ಆಯೂಬ್ ಹಾಜಿ, ಕೌಸರ್, ಅಬ್ದುಲ್ ಹಾಜಿ, ಇಸ್ಮಾಯಿಲ್ ಬೀಜುವಳ್ಳಿ, ಇಬ್ರಾಹೀಂ ಹಾಜಿ, ಹಸನಬ್ಬಕೊಟ್ಟಿಗೆಹಾರ, ಸುಲೈಮಾನ್ ಮುಸ್ಲಿಯಾರ್, ನಾಸಿರ್, ಅಶ್ರಫ್ ಮತ್ತಿತರರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.







