ಮೈಸೂರು: ಡಾ.ರಾಜ್‍ಕುಮಾರ್ ಮೊಮ್ಮಗ ಯುವರಾಜ್ ಕುಮಾರ್ ನಿಶ್ಚಿತಾರ್ಥ

ಮೈಸೂರು,ಜು.5: ಮೈಸೂರಿನಲ್ಲಿ ಡಾ.ರಾಜ್‍ಕುಮಾರ್ ಅವರ ಮೊಮ್ಮಗ ರಾಘವೇಂದ್ರ ರಾಜ್ ಕುಮಾರ್ ಅವರ ದ್ವಿತೀಯ ಪುತ್ರ ಯುವರಾಜ್ ಕುಮಾರ್ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ರಾಘವೇಂದ್ರ ರಾಜ್‍ಕುಮಾರ್ ದ್ವಿತೀಯ ಪುತ್ರ ಯುವರಾಜ್ ಕುಮಾರ್ ಅವರ ನಿಶ್ಚಿತಾರ್ಥ ಮೈಸೂರಿನ ಯುವತಿ ಶ್ರೀದೇವಿ ಬೈರಪ್ಪ ಎಂಬುವರ ಜೊತೆ ನೆರವೇರಿತು. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ದಂಪತಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತವರ ಪತ್ನಿ ಅಶ್ವಿನಿ ಆಗಮಿಸಿ ಶುಭಹಾರೈಸಿದರು.
ಸಂಪ್ರದಾಯದಂತೆ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದ್ದು, ಗಣ್ಯರು ಶುಭ ಹಾರೈಸಿದರು. ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಿದ್ದರು ಎನ್ನಲಾಗಿದ್ದು, ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ರಾಜ್ ಕುಟುಂಬ ಸಂಭ್ರಮಿಸಿದೆ.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ನಟ ಶಿವರಾಜ್‍ಕುಮಾರ್, ಸಾಂಸ್ಕೃತಿಕ ನಗರಿ ಮೈಸೂರಿನ ಹುಡುಗಿ ನಮ್ಮ ಮನೆ ಸೇರುತ್ತಿರುವುದು ಸಂತೋಷ ತಂದಿದೆ. ಮೈಸೂರಿಗೂ ನಮ್ಮ ಕುಟುಂಬಕ್ಕೂ ಅವಿನಾಭವ ಸಂಬಂಧ, ಇದೇ ರೀತಿ ಮೈಸೂರಿನ ಸಂಬಂಧ ನಮ್ಮ ಮನೆಗೆ ಹೆಚ್ಚು ಹೆಚ್ಚು ಬರಲಿ ಎಂದು ಅರಸಿದರು.
ಮೈಸೂರಿಗೆ ಬರುವುದೆಂದರೆ ನಮ್ಮ ಕುಟುಂಬಕ್ಕೆ ಸಂಭ್ರಮ. ಅಪ್ಪಾಜಿ ಮೈಸೂರಿಗೆ ಹೆಚ್ಚು ಶೂಟಿಂಗ್‍ಗಾಗಿ ಬರುತ್ತಿದ್ದರು. ನಾವು ದಸರಾ ನೋಡಲು ಬರುತ್ತೇವೆ. ಮೈಸೂರು ಎಂದರೆ ನಮಗೆ ಹೆಚ್ಚು ಖುಷಿ. ಈಗ ಉಂಗುರ ಮಾತ್ರ ಬದಲಾಯಿಸಲಾಗಿದೆ. ಮುಂದೆ ಮದುವೆ ಮೈಸೂರಿನಲ್ಲೊ ಅಥವಾ ಬೆಂಗಳೂರಿನಲ್ಲೊ ಎಂಬುದನ್ನು ಎಲ್ಲರೂ ಒಟ್ಟಿಗೆ ಕುಳಿತು ತೀರ್ಮಾನ ಮಾಡುವುದಾಗಿ ಹೇಳಿದರು.







