ಮೋದಿಯನ್ನು ಅವಮಾನಿಸಿದರೆ ಹೊಡೆಯುತ್ತೇವೆ
ಲೇಖಕನಿಗೆ ಕೇರಳ ಬಿಜೆಪಿ ಮುಖಂಡನ ಎಚ್ಚರಿಕೆ

ತಿರುವನಂತಪುರಂ, ಜು.೬: ಪ್ರಧಾನಿ ಮೋದಿಯ ವಿರುದ್ಧ ಅವಹೇಳನಾತ್ಮಕವಾಗಿ ಟೀಕೆ ಮಾಡಿದರೆ ನಿಮ್ಮನ್ನು ಹೊಡೆದು ಹಾಕಲಾಗುವುದು ಎಂದು ಮಲಯಾಳಂ ಲೇಖಕನಿಗೆ ಕೇರಳದ ಬಿಜೆಪಿ ಮುಖಂಡ ಬೆದರಿಕೆ ಒಡ್ಡಿದ್ದಲ್ಲದೆ ಲೇಖಕನ ವಿರುದ್ಧ ಠಾಣೆಯಲ್ಲಿ ದೂರನ್ನೂ ದಾಖಲಿಸಿರುವುದಾಗಿ ವರದಿಯಾಗಿದೆ.
ಖ್ಯಾತ ಸಣ್ಣ ಕತೆಗಳ ಲೇಖಕ ಹಾಗೂ ಕಾದಂಬರಿಕಾರ ಪೌಲ್ ಝಕಾರಿಯಾ ಇತ್ತೀಚೆಗೆ ಪಾಲಕ್ಕಾಡ್‌ನಲ್ಲಿ ನಡೆದಿದ್ದ ಪ್ರಸಿದ್ಧ ಕಾರ್ಟೂನಿಸ್ಟ್ ಮತ್ತು ಸಾಹಿತಿ ಒ.ವಿ.ವಿಜಯನ್‌ರ ಸನ್ಮಾನ ಸಮಾರಂಭದಲ್ಲಿ ಪ್ರಧಾನಿಯನ್ನು ಕೊಲೆಗಾರ ಎಂದು ಕರೆದಿದ್ದರು ಎಂದು ಆರೋಪಿಸಲಾಗಿದೆ. ಇದೇ ವೇದಿಕೆಯಲ್ಲಿ ಅವರು, ವಿಜಯನ್ ಮೃದು ಹಿಂದುತ್ವ ಧೋರಣೆ ಹೊಂದಿದ್ದಾರೆ ಎಂದು ಹೇಳಿದಾಗ ವಿಜಯನ್ ಕುಟುಂಬದ ಸದಸ್ಯರು ವೇದಿಕೆಯಲ್ಲೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಪ್ರಧಾನಿಯ ಬಗ್ಗೆ ಝಕಾರಿಯಾ ಇದೇ ರೀತಿ ಅವಹೇಳನ ಮಾಡುತ್ತಿದ್ದರೆ ಪಕ್ಷದ ಕಾರ್ಯಕರ್ತರು ಒಂದು ದಿನ ಅವರನ್ನು ಹೊಡೆಯುತ್ತಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಬಿ.ಗೋಪಾಲಕೃಷ್ಣನ್ ಎಚ್ಚರಿಸಿದ್ದಾರೆ. ಝಕಾರಿಯ ನಿಜವಾದ ಕೋಮುವಾದಿ. ಮಲಯಾಳಂ ಸಾಹಿತ್ಯರಂಗಕ್ಕೆ ಅವರೊಬ್ಬ ಕಂಟಕ ಎಂದು ಟೀಕಿಸಿರುವ ಗೋಪಾಲಕೃಷ್ಣನ್, ಝಕಾರಿಯಾ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯ ಬಳಿಕವಷ್ಟೇ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





