ಅಪರಿಚಿತನ ಕರೆ ನಂಬಿ ಮೋಸ ಹೋದ ಮಾಜಿ ಶಾಸಕ ಜೆ.ಆರ್.ಲೋಬೊ !
ಬ್ಯಾಂಕ್‌ನಿಂದ 49 ಸಾವಿರ ರೂ. ಲೂಟಿದ ವಂಚಕ

ಮಂಗಳೂರು, ಜು. 7: ಅಪರಿಚಿತ ವ್ಯಕ್ತಿಯೊಬ್ಬನ ಕರೆಯನ್ನು ನಂಬಿದ ಮಾಜಿ ಶಾಸಕ ಜೆ.ಆರ್. ಲೋಬೊ ತನ್ನ ಬ್ಯಾಂಕ್ ಖಾತೆಯಿಂದ 49 ಸಾವಿರ ರೂ. ಕಳಕೊಂಡ ವಿದ್ಯಮಾನ ಕೆಲವು ದಿನಗಳ ಹಿಂದೆ ನಡೆದಿದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕದ್ರಿ ಪೊಲೀಸರು ಮುಂದಿನ ತನಿಖೆಗಾಗಿ ಸೈಬರ್ ಕ್ರೈಂ ಠಾಣೆಗೆ ಹಸ್ತಾಂತರಿಸಿದ್ದಾರೆ.
ಮಾಜಿ ಶಾಸಕ ಜೆ.ಆರ್.ಲೋಬೊ ಅವರಿಗೆ ಇತ್ತೀಚೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ಮಾತನಾಡುತ್ತಿರುವುದಾಗಿ ಹೇಳಿದನಲ್ಲದೆ, ನಿಮ್ಮ ಎಟಿಎಂ ಕಾರ್ಡ್ ಲ್ಯಾಪ್ಸ್ ಆಗುತ್ತದೆ. ಅದನ್ನು ಅಪ್‌ಡೇಟ್ ಮಾಡುವುದಾಗಿ ಹೇಳಿದ. ಆತನ ಮಾತನ್ನು ನಂಬಿದ ಮಾಜಿ ಶಾಸಕರು ಎಟಿಎಂ ಸಂಖ್ಯೆಯನ್ನು ತಿಳಿಸಿದ್ದಾರೆ. ಅಲ್ಲದೆ, ತಮಗೆ ಈಗ ಒಟಿಪಿ ಸಂಖ್ಯೆ ಬರುತ್ತದೆ, ಅದನ್ನೂ ತಿಳಿಸಿ ಎಂದಿದ್ದ. ಅದರಂತೆ ಮಾಜಿ ಶಾಸಕರು ಒಟಿಪಿ ಸಂಖ್ಯೆಯನ್ನೂ ತಿಳಿಸಿದರು. ಕೆಲವೇ ಕ್ಷಣದಲ್ಲಿ ಬ್ಯಾಂಕ್ ಖಾತೆಯಿಂದ 49 ಸಾವಿರ ರೂಪಾಯಿ ಡ್ರಾ ಆಗಿರುವ ಬಗ್ಗೆ ಮೊಬೈಲ್ ಸಂದೇಶ ಬಂದಿದೆ. ತಾನು ಅಪರಿಚಿತ ವ್ಯಕ್ತಿಯ ಕರೆಯಿಂದ ಮೋಸ ಹೋಗಿರುವುದಾಗಿ ತಿಳಿದುಕೊಂಡ ಮಾಜಿ ಶಾಸಕ ಜೆ.ಆರ್.ಲೋಬೊ ತಕ್ಷಣ ಬ್ಯಾಂಕ್ ಅಧಿಕಾರಿಯನ್ನು ಸಂಪರ್ಕಿಸಿ ಎಟಿಎಂ ಸ್ಥಗಿತಕ್ಕೆ ಮನವಿ ಮಾಡಿದರು. ನಂತರ ಬ್ಯಾಂಕ್ ಅಧಿಕಾರಿಗಳು ಎಟಿಎಂ ಚಲನೆಯನ್ನು ಸ್ಥಗಿತಗೊಳಿಸಿದ್ದಾರೆ. ಆ ಬಳಿಕ ಜೆ.ಆರ್.ಲೋಬೊ ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.