ಸಾಲಮನ್ನಾ ವಿಷಯದಲ್ಲೂ ಕುಮಾರಸ್ವಾಮಿ ವಚನ ಭ್ರಷ್ಟತೆ: ಜಗದೀಶ್ ಶೆಟ್ಟರ್ ಆರೋಪ

ಬೆಂಗಳೂರು, ಜು. 8: ಜೆಡಿಎಸ್-ಬಿಜೆಪಿ ಸರಕಾರದ ಅವಧಿಯಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೆ ವಚನ ಭ್ರಷ್ಟರಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಇದೀಗ ರೈತರ ಸಂಪೂರ್ಣ ಸಾಲಮನ್ನಾ ವಿಚಾರದಲ್ಲಿಯೂ ವಚನ ಭ್ರಷ್ಟರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.
ರವಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರ ಘೋಷಿಸಿದ ರೈತರ ಸಾಲಮನ್ನಾ ಅತ್ಯಂತ ಗೊಂದಲದಿಂದ ಕೂಡಿದ್ದು, ಇದರ ಲಾಭ ರೈತರಿಗೆ ಆಗಲಿದೆ ಎಂಬುದು ಸಂಶಯವಿದೆ. ಸಾಲ ಮರು ಪಾವತಿ ಮಾಡಿದ ರೈತರಿಗೆ ಕೇವಲ 25 ಸಾವಿರ ರೂ.ನೀಡುವ ಹೇಳಿಕೆ ರೈತರ ನಡುವೆ ತಾರತಮ್ಯ ಸೃಷ್ಟಿಸಿದೆ ಎಂದು ದೂರಿದರು.
ರಾಜ್ಯದಲ್ಲಿ ಒಟ್ಟು 54 ಸಾವಿರ ಕೋಟಿ ರೂ.ಸಾಲವಿದ್ದು, ಆ ಪೈಕಿ ಕೇವಲ 34 ಸಾವಿರ ಕೋಟಿ ರೂ.ಗಳಷ್ಟು ಸಾಲಮನ್ನಾ ಮಾಡಿದ್ದು, ಉಳಿದ ಸಾಲವನ್ನು ಮನ್ನಾ ಮಾಡುವವರು ಯಾರು ಎಂದು ಪ್ರಶ್ನಿಸಿದ ಅವರು, ಸಾಲಮನ್ನಾ ಬಗ್ಗೆ ರೈತರೇ ಅಸಮಾಧಾನಗೊಂಡಿದ್ದಾರೆ ಎಂದರು.
ನಾನು ಮುಖ್ಯಮಂತ್ರಿ ಆಗಿದ್ದ ವೇಳೆ 5 ಸಾವಿರ ಸರಕಾರಿ ಶಾಲೆ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಇದೀಗ 28 ಸಾವಿರ ಸರಕಾರಿ ಶಾಲೆಗಳ ವಿಲೀನಕ್ಕೆ ಮುಂದಾಗಿದ್ದಾರೆ. ಇವರ ಆಡಳಿತ ದ್ವಂದ್ವಕ್ಕೆ ಏನೆನ್ನಬೇಕು ಎಂದು ಪ್ರಶ್ನಿಸಿದ ಅವರು, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಲು ಮೀನಾಮೇಷ ಏಕೆ ಎಂದು ಕೇಳಿದರು.







