ತೆರಿಗೆ ವಂಚನೆ ಆರೋಪ: ಬಂಧನ

ಬೆಂಗಳೂರು, ಜು. 8: ಕೇಂದ್ರದ ಆದಾಯ ತೆರಿಗೆ ಇಲಾಖೆಗೆ 15 ಕೋಟಿ ರೂ. ತೆರಿಗೆ ವಂಚನೆ ನಡೆಸಿದ್ದ ಆರೋಪದ ಮೇಲೆ ಕಂಪೆನಿಯೊಂದರ ವ್ಯವಸ್ಥಾಪಕ ನಿರ್ದೇಶಕನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ನಗರದ ಆಟೋಮೊಟಿವ್ ಹೆಸರಿನ ಕಂಪೆನಿಯೊಂದರ ವ್ಯವಸ್ಥಾಪಕ ನಿರ್ದೇಶಕನಾಗಿದ್ದ ವ್ಯಕ್ತಿಯನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ.
ಕೇಂದ್ರೀಯ ತೆರಿಗೆ ಇಲಾಖೆಯ ಪ್ರಿವೆಂಟಿವ್ ಯುನಿಟ್‌ನಿಂದ ಸಂಗ್ರಹಿಸಲಾದ ನಿರ್ದಿಷ್ಟ ಗುಪ್ತಚರ ಮಾಹಿತಿ ಆಧಾರದಲ್ಲಿ ತೆರಿಗೆ ವಂಚನೆ ಪ್ರಕರಣ ಪತ್ತೆಯಾಗಿದೆ ಎಂದು ಹಣಕಾಸು ಸಚಿವಾಲಯವು ಹೇಳಿಕೆ ನೀಡಿದೆ. ಆರೋಪಿಯು 2017ರ ಆಗಸ್ಟ್ ತಿಂಗಳಿನಿಂದ 2018ರ ಮೇ ವರೆಗೆ ಜಿಎಸ್ಟಿ ಪಾವತಿ ಮಾಡದೆ ವಂಚಿಸಿದ್ದರು ಎನ್ನಲಾಗಿದೆ.
ಸಿಜಿಎಸ್ಟಿ ಕಲಂ 132 ರ ಅನುಸಾರ ಅಪರಾಧಿಗೆ ಕನಿಷ್ಟ 5ವರ್ಷಗಳ ಜೈಲುವಾಸದ ಶಿಕ್ಷೆ ವಿಧಿಸಬಹುದಾಗಿದೆ. ಹಾಗೆಯೇ ಇಂತಹಾ ಅಪರಾಧವು ಜಾಮೀನು ರಹಿತ ಪ್ರಕರಣ ಎಂದು ಗುರುತಿಸಲ್ಪಡಲಿದೆ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
Next Story





