ರಸ್ತೆ ದಾಟುತ್ತಿದ್ದ ವೇಳೆ ಜೀಪ್ ಢಿಕ್ಕಿ: ಕಾರ್ಮಿಕ ಮೃತ್ಯು

ಬೆಂಗಳೂರು, ಜು.8: ರಸ್ತೆ ದಾಟುತ್ತಿದ್ದ ಕಟ್ಟಡ ಕಾರ್ಮಿಕರೊಬ್ಬರ ಮೇಲೆ ಶರವೇಗವಾಗಿ ಬಂದ ಜೀಪ್‌ಯೊಂದು ಹರಿದ ಪರಿಣಾಮ ಮೃತಪಟ್ಟಿರುವ ದುರ್ಘಟನೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಪೆನಗೊಂಡ ಮೂಲದ ಕೋಟೇಶ್ವರ ರಾವ್(60) ಮೃತಪಟ್ಟ ಕಟ್ಟಡ ಕಾರ್ಮಿಕರು ಎಂದು ಪೊಲೀಸರು ಗುರುತಿಸಿದ್ದಾರೆ.
ಕೂಲಿ ಅರಸಿ ನಗರಕ್ಕೆ ಬಂದಿದ್ದ ಅವರು ಎಚ್‌ಎಸ್‌ಆರ್ ಲೇಔಟ್‌ನ ದೊಡ್ಡಕನ್ನಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡು ನೆಲೆಸಿದ್ದರು. ಶನಿವಾರ ರಾತ್ರಿ 8ರ ಸುಮಾರಿಗೆ ಹೊರಗೆ ಹೋಗಿದ್ದ ಅವರು ಮತ್ತೆ ಕಟ್ಟಡಕ್ಕೆ ಬರಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಜೀಪ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಎಚ್‌ಎಸ್‌ಆರ್ ಲೇಔಟ್‌ನ ಸಂಚಾರ ಪೊಲೀಸರು, ಜೀಪ್ ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
Next Story





