ಯಶಸ್ಸು, ಆತ್ಮವಿಶ್ವಾಸದಿಂದ ಸಾಧನೆ ಹಾದಿ ಸುಗಮ: ಡಾ. ಶರತ ಬಾಳೆಮನೆ

ಭಟ್ಕಳ, ಜು. 8: ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳ ಪರಿಶ್ರಮವೇ ಅವರ ಮುಂದಿನ ಗುರಿಗೆ ಉತ್ತಮ ಮಾರ್ಗ ಕಲ್ಪಿಸುತ್ತದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಮುನ್ನಡೆಯಬೇಕಿದೆ ಎಂದು ಮುಗಳಿಕೋಣೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಭಟ್ಕಳ ಗಾಣಿಗ ಸೇವಾ ಸಂಘದ ವತಿಯಿಂದ ಆಯೋಜಿಸಲಾದ ಪ್ರತಿಭಾ ಪುರಸ್ಕಾರ, ಉಚಿತ ವೈದ್ಯಕೀಯ ತಪಾಸಣೆ ಕಾರ್ಯಕ್ರಮದಲ್ಲಿ ಯನೆಪೊಯ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಶರತ ಬಾಳೆಮನೆ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯನಪೋಯ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಶರತ ಬಾಳೆಮನೆ ಸಾಧನೆಯ ಯಶಸ್ಸು ಪಡೆಯಲು ಮಾರ್ಗ ಸರಳವಾಗಿಲ್ಲ, ಆದರೆ ಸತತ ಪರಿಶ್ರಮದಿಂದ ಯಶಸ್ಸಿನ ಹಾದಿಯತ್ತ ಸಾಗಲು ಸಾಧ್ಯ. ಯಶಸ್ಸಿನಲ್ಲಿ ಜ್ಞಾನ ಶಕ್ತಿ, ಇಚ್ಛಾಶಕ್ತಿ, ಕ್ರಿಯಾ ಶಕ್ತಿಯೆಂಬ ಅಂಶ ಅಳವಡಿಕೊಂಡರೆ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಜೀವನವನ್ನು ಉತ್ತಮವಾಗಿ ಮಾಡಲು ಸಾಧ್ಯ. ಜೊತೆಗೆ ವಿದ್ಯಾರ್ಥಿಗಳು ಸಿಕ್ಕ ಅವಕಾಶದಲ್ಲಿ ಅದರ ಸದುಪಯೋಗ ಪಡೆದುಕೊಳ್ಳಲು ಯತ್ನಿಸಬೇಕು.ವಿದ್ಯಾರ್ಥಿಗಳಲ್ಲಿನ ಕಿಚ್ಚು ಯಾವತ್ತು ಸಕ್ರಿಯವಾಗಿದ್ದರೆ ಗುರಿ ಸಾಧನೆಗೆ ಸಹಕಾರಿಯಾಗಲಿದೆ. ಹಾಗೂ ಮಾನವೀಯ ಅಂಶವೂ ವಿದ್ಯಾರ್ಥಿಗಳಲ್ಲಿ ಇತ್ತೀಚಿನ ದಿನದಲ್ಲಿ ಕಂಡು ಬರುತ್ತಿಲ್ಲವಾಗಿದ್ದು, ಈ ಬಗ್ಗೆ ಪಾಲಕರು ಮಕ್ಕಳ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗುರು ಸುಧೀಂದ್ರ ಪಿಯು ಕಾಲೇಜು ಪ್ರಾಂಶುಪಾಲ ವಿರೇಂದ್ರ ಶ್ಯಾನಭಾಗ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಇಂದಿನ ವಿದ್ಯಾರ್ಥಿಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿದ್ದು ಇಂದಿನ ವಿದ್ಯಾರ್ಥಿಗಳಿಗೆ ಎಲ್ಲವೂ ಕೈಗೆಟುಕುವ ರೀತಿಯಲ್ಲಿ ವ್ಯವಸ್ಥೆ ಸಿಗುತ್ತಿದ್ದರ ಪರಿಣಾಮ ಅವರ ಮನೋಭಾವ ಕಠಿಣತೆಗೆ ಜೀವನ ಒಡ್ಡಲು ತಯಾರಿಲ್ಲವಾಗಿದೆ. ಶ್ರಮ ಪಡದೇ ಉತ್ತಮ ಅಂಕ ಸಿಗಬೇಕೆಂಬುದು ವಿದ್ಯಾರ್ಥಿಗಳಲ್ಲಿದ್ದು ಅವರಲ್ಲಿ ವ್ಯಾಕುಲತೆ ಅಧಿಕವಾಗುತ್ತಿದೆ. ಶಿಕ್ಷಣದ ಮೇಲೆ ಆಸಕ್ತಿ ಕಡಿಮೆ ಆಗುತ್ತಿರುವ ದಿನದಲ್ಲಿ ಪಾಲಕರು ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಬೇಕಿದೆ ಎಂದರು.
ಯನೆಪೊಯ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಶರತ ಬಾಳೆಮನೆ ಅವರನ್ನು ಗಾಣಿಗ ಸೇವಾ ಸಂಘದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಾಣಿಗ ಸಮಾಜದ ನಿವೃತೃ ಯೋಧರಾದ ಗಿರೀಶ ಶೆಟ್ಟ, ವಿನಾಯಕ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಗಾಣಿಗ ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ 80% ಅಂಕ ಪಡೆದ ಒಟ್ಟು 20 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಇದೇ ವೇಳೆ 120 ಬಡ ವಿದ್ಯಾರ್ಥಿಗಳಿಗೆ 600ಕ್ಕೂ ಅಧಿಕ ಉಚಿತ ನೋಟ್ ಬುಕ್ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಯನೆಪೋಯ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಶರತ ಬಾಳೆಮನೆ ನೇತೃತ್ವದಲ್ಲಿ ಎಲುಬು ಮತ್ತು ಕೀಲು ತಜ್ಞರಿಂದ ಉಚಿತ ತಪಾಸಣೆ ಹಾಗೂ ಉಚಿತ ಮೂಳೆಯ ಖನಿಜ ಸಾಂದ್ರತೆ ಪರೀಕ್ಷೆ ನಡೆಸಿಕೊಡಲಾಯಿತು. ಒಟ್ಟು 250ಕ್ಕೂ ಅಧಿಕ ಶಿಬಿರಾರ್ಥಿಗಳು ಉಚಿತ ತಪಾಸಣೆಯ ಪ್ರಯೋಜನೆ ಪಡೆದುಕೊಂಡರು.
ಈ ಸಂಧರ್ಭದಲ್ಲಿ ಭಟ್ಕಳ ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಮೂರು ದೇವಸ್ಥಾನ ಕಮಿಟಿಯ ಮೋಕ್ತೆಸರ ಎಮ್.ಎನ್.ಶೆಟ್ಟಿ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಕಮಿಟಿ ಅಧ್ಯಕ್ಷ ನಾರಾಯಣ ಶೆಟ್ಟಿ, ಭಟ್ಕಳ ಅರ್ಬನ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಸುಭಾಸ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಮನೋಜ ಶೆಟ್ಟಿ ಹಾಗೂ ಉಷಾ ಶೆಟ್ಟಿ ನಿರ್ವಹಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ ಸ್ವಾಗತಿಸಿದರೆ ಸಂಘದ ಕಾರ್ಯದರ್ಶಿ ರಾಜೇಶ ಶೆಟ್ಟಿ ವಂದಿಸಿದರು.







