ಥಾಯ್ ಗುಹೆಯಿಂದ 4 ಮಕ್ಕಳ ರಕ್ಷಣೆ

ಬ್ಯಾಂಕಾಕ್, ಜು.8: ಥಾಯ್ ಗುಹೆಯೊಳಗೆ ಸಿಲುಕಿರುವ 12 ಮಕ್ಕಳು ಹಾಗು ಫುಟ್ಬಾಲ್ ಕೋಚ್ ಅವರ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, 4 ಮಕ್ಕಳನ್ನು ಗುಹೆಯಿಂದ ಹೊರಕ್ಕೆ ತರಲಾಗಿದೆ.
ಕಳೆದ ಎರಡು ವಾರಗಳಿಂದ ಮಕ್ಕಳು ಸಹಿತ ಕೋಚ್ ಗುಹೆಯೊಳಗೆ ಸಿಲುಕಿದ್ದಾರೆ. ರಕ್ಷಿಸಲ್ಪಟ್ಟ ಮಕ್ಕಳಿಗೆ ಕೂಡಲೇ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. "ಗುಹೆಯ ಸಮೀಪದಲ್ಲಿರುವ ವೈದ್ಯಕೀಯ ಶಿಬಿರದಲ್ಲಿ ಅವರನ್ನು ತಪಾಸಣೆಗೊಳಪಡಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಮಕ್ಕಳು ಸಿಲುಕಿರುವ ಪ್ರದೇಶದಿಂದ ಹೊರಬರುವ ಮಾರ್ಗ ಮಧ್ಯೆ ಸಿಗುವ ಕಡಿದಾದ ಕಗ್ಗತ್ತಲ ಸುರಂಗವೇ ಸದ್ಯ ಇಡೀ ಕಾರ್ಯಾಚರಣೆಗೆ ಹಿನ್ನಡೆಯನ್ನುಂಟು ಮಾಡುತ್ತಿದೆ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು. ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿರುವ ವೈಲ್ಡ್ ಬೋರ್ ತಂಡಕ್ಕೆ ಥಾಯ್ ಗುಹೆಯಲ್ಲಿರುವ ಟಿ-ಜಂಕ್ಷನ್ ಅಥವಾ ಸಾಮ್ ಯಾಕ್ ಸಮೀಪ ಸಿಗುವ ಕಡಿದಾದ ಕಗ್ಗತ್ತಲ ಸುರಂಗ ಅತ್ಯಂತ ಅಪಾಯಕಾರಿ ಪ್ರದೇಶವಾಗಿ ಪರಿಣಮಿಸಿದೆ. ಇದರ ಜೊತೆಗೆ ಇನ್ನೂ ಹಲವು ಅಪಾಯಗಳು ಎದುರಾಗುವ ಸಾಧ್ಯತೆಯಿದೆ ಎಂದು ಥಾಯ್ ಅಧಿಕಾರಿಗಳು ತಿಳಿಸಿದ್ದರು.
ರಕ್ಷಣಾ ಕಾರ್ಯಾಚರಣೆ ಸಂಪೂರ್ಣಗೊಳ್ಳಲು ಎರಡರಿಂದ ನಾಲ್ಕು ದಿನಗಳು ಹಿಡಿಯಬಹುದು ಎಂದು ತಿಳಿಸಿರುವ ಸೇನಾ ಕಮಾಂಡರ್ ಮೇಜರ್ ಜನರಲ್ ಚಲೊಂಗ್ಚಾಯ್, ಇದು ಹವಾಮಾನದ ಮೇಲೆಯೂ ಅವಲಂಬಿತವಾಗಿದೆ ಎಂದು ತಿಳಿಸಿದ್ದರು.
ಜೂನ್ 23ರಂದು ಗುಹೆಯ ಒಳಹೊಕ್ಕ ಮಕ್ಕಳ ಫುಟ್ಬಾಲ್ ತಂಡವು ಈ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯ ಕಾರಣ ಗುಹೆಯಲ್ಲಿ ಪ್ರವಾಹದ ನೀರು ತುಂಬಿದ ಪರಿಣಾಮ ಗುಹೆಯ ಪ್ರವೇಶದಾರಿಯಿಂದ ನಾಲ್ಕು ಕಿ.ಮೀ. ದೂರದಲ್ಲಿ ಸಿಲುಕಿಕೊಂಡಿದ್ದರು. ಈ ಮಕ್ಕಳು ಸದ್ಯ ಗುಹೆಯಿಂದ ಹೊರಬರಲು ಹಲವು ಸಂಕಷ್ಟಗಳನ್ನು, ಸವಾಲುಗಳನ್ನು ಎದುರಿಸಬೇಕಿದೆ. 11ರಿಂದ 16ರ ಹರೆಯದ ಈ ಮಕ್ಕಳಿಗೆ ನೀರಿನಲ್ಲಿ ಮುಳುಗು ಹೊಡೆದು ಅಭ್ಯಾಸವಿಲ್ಲ, ಕೆಲವರಿಗಂತೂ ಈಜೂ ತಿಳಿದಿಲ್ಲ. ಗುಹೆಯಿಂದ ಹೊರಬರುವ ಸಲುವಾಗಿ ಅವರಿಗೆ ಈಜು ಕಲಿಸಲಾಗುತ್ತಿದ್ದರೂ ಅವರು ವೇಗವಾಗಿ ಹರಿಯುವ ನೀರಿನಲ್ಲಿ ಕಗ್ಗತ್ತಲೆಯಲ್ಲಿ ಸ್ಕೂಬಾ ಡೈವರ್‌ಗಳು ಉಪಯೋಗಿಸುವ ಉಪಕರಣಗಳನ್ನು ಬಳಸಬೇಕಾಗುತ್ತದೆ. ಇದು ಅನುಭವಿ ಮುಳಗುತಜ್ಞರಿಗೂ ಸವಾಲಿನ ವಿಷಯವಾಗಿದೆ. ರಕ್ಷಣಾ ತಂಡದಲ್ಲಿ ಹದಿಮೂರು ವಿಶ್ವದರ್ಜೆಯ ವಿದೇಶೀ ಮುಳುಗು ತಜ್ಞರಿದ್ದು ಅವರೊಂದಿಗೆ ಥಾಯ್ ನೇವಿ ಸೀಲ್ ಕೂಡಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಇಡೀ ಗುಹಾ ಪ್ರಯಾಣದ ವೇಳೆ ತಾಳ್ಮೆ ಬಹಳ ಮುಖ್ಯ ಅಂಶವಾಗುತ್ತದೆ. ಒಬ್ಬ ವ್ಯಕ್ತಿ ಗೊಂದಲಕ್ಕೀಡಾದರೂ ಇಡೀ ತಂಡವೇ ಅಪಾಯಕ್ಕೆ ಸಿಲುಕಬಹುದು ಎಂದು ರಕ್ಷಣಾ ತಂಡದ ಸಿಬ್ಬಂದಿ ತಿಳಿಸಿದ್ದಾರೆ. ರವಿವಾರ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು ಸೋಮವಾರ ಮತ್ತು ಮಂಗಳವಾರ ತೀವ್ರ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಇದರಿಂದ ರಕ್ಷಣಾ ಕಾರ್ಯವನ್ನು ರವಿವಾರವೇ ಮುಗಿಸುವ ಒತ್ತಡಕ್ಕೆ ರಕ್ಷಣಾ ತಂಡ ಸಿಲುಕಿದೆ. ಆದರೆ ಇಡೀ ಕಾರ್ಯಾಚರಣೆ ಸಂಪೂರ್ಣಗೊಳ್ಳಲು ಎರಡರಿಂದ ನಾಲ್ಕು ದಿನಗಳು ಬೇಕಾದೀತು ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
ಶುಕ್ರವಾರ ಆಮ್ಲಜನಕದ ಕೊರತೆಯಿಂದಾಗಿ ನೇವಿ ಸೀಲ್ ಪಡೆಯ ಮಾಜಿ ಅಧಿಕಾರಿಯೊಬ್ಬರು ನೀರನಡಿ ಸಾವನ್ನಪ್ಪಿದ ನಂತರ ಈ ಗುಹೆಯಿಂದ ಈಜಿ ಹೊರಬರಲು ಇರುವ ಸವಾಲುಗಳ ಬಗ್ಗೆ ಮೊಟ್ಟಮೊದಲ ಬಾರಿ ಜಗತ್ತಿಗೆ ತಿಳಿಯಿತು.
ರವಿವಾರವೂ ಗುಹಾ ಪ್ರದೇಶದ ಸಮೀಪ ಹವಾಮಾನ ವಿಪರೀತವಾಗಿದ್ದು ನೀರಿನ ಮಟ್ಟವು ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಜೊತೆಗೆ ಹವಾಮಾನ ಇಲಾಖೆ ಕೂಡಾ ಈ ಪ್ರದೇಶದಲ್ಲಿ ತೀವ್ರ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಹೀಗಾದಲ್ಲಿ ಇಡೀ ಪ್ರದೇಶವೇ ನೆರೆಪೀಡಿತವಾಗಲಿದ್ದು ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ದುಸ್ತರವಾಗಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.







