ಲೇಖಕರಿಗೆ ಪ್ರಕಾಶಕರ ಸಹಕಾರ ಅಗತ್ಯ: ಲೇಖಕಿ ಮಂಗಳಾ ಪ್ರಿಯದರ್ಶಿನಿ

ಬೆಂಗಳೂರು, ಜು.8: ಕನ್ನಡ ಸಾಹಿತ್ಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾದರೆ ಉತ್ತಮ ಲೇಖಕರ ಹಾಗೂ ಪ್ರಕಾಶಕರ ಅಗತ್ಯವಿದೆ ಹಾಗೂ ಲೇಖಕರಿಗೆ ಪ್ರಕಾಶಕರ ಸಹಕಾರ ಅಗತ್ಯವಿದೆ ಎಂದು ಲೇಖಕಿ ಡಾ.ಡಿ.ಮಂಗಳಾ ಪ್ರಿಯದರ್ಶಿನಿ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀಲೇಖಾ ದತ್ತಿ ಹಾಗೂ ಪ್ರೇಮಾಭಟ್, ಎ.ಎಸ್.ಭಟ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ನಿರೀಕ್ಷೆಗಳನ್ನು ಕವಿ ತನ್ನ ಲೇಖಕದ ಮೂಲಕ ತಿಳಿಸುತ್ತಾನೆ. ಆ ಲೇಖನವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಪ್ರಕಾಶಕರು ಮಾಡುತ್ತಾರೆ ಎಂದರು.
ನವೋದಯ ಕವಿಗಳ ಹಾಗೂ ಪ್ರಕಾಶಕನ ಸಂಘರ್ಷದ ನಡುವೆ ಹೊಸ ಹೊಸ ಲೇಖಕರ ಪ್ರತಿಭೆಗಳನ್ನು ಗುರುತಿಸಿ ಅವರ ಪುಸ್ತಕಗಳನ್ನು ಪ್ರಕಟಿಸುವ ಕಾರ್ಯದಲ್ಲಿ ಸುಂದರ ಪ್ರಕಾಶನ ತೊಡಗಿಸಿಕೊಂಡಿದ್ದು, ಇದುವರೆಗೂ 400ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಲಾಭ ನಷ್ಟಗಳನ್ನು ಲೆಕ್ಕಿಸದೆ ಮೌಲಿಕ ಪುಸ್ತಕಗಳನ್ನು ಪ್ರಕಟಿಸುವ ಕಾರ್ಯದಲ್ಲಿ ಪ್ರಕಾಶನ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಭಾವಕ್ಕೆ ಉತ್ತಮ ಭಾಷೆ ದೊರೆತಾಗಲೇ ಉತ್ತಮ ಸಾಹಿತಿಯಾಗಲು ಸಾಧ್ಯ. ಒಬ್ಬ ಅನುವಾದಕನಿಗೆ ವಿಮರ್ಶಾತ್ಮಕ ಪ್ರಜ್ಞೆ, ಕಥೆಯ ಸುತ್ತಮುತ್ತಲಿನ ಪರಿಸರ ಪ್ರಜ್ಞೆಯೊಂದಿಗೆ ಸಂಶೋಧನಾತ್ಮಕ ವಿದ್ವತ್‌ಶೀಲತೆ ಇರಬೇಕು. ಇವೆಲ್ಲವೂ ಅನುವಾದಕಿ ಡಾ.ವನಮಾಲಾ ವಿಶ್ವನಾಥ ಅವರಲ್ಲಿ ಕಾಣಬಹುದು ಎಂದು ಹೇಳಿದರು. ರಾಘವಾಂಕನ ಹರಿಶ್ಚಂದ್ರ ಕಾವ್ಯವನ್ನು ‘ ದಿ ಲೈಫ್ ಆಫ್ ಹರಿಶ್ಚಂದ್ರ’ ಇಂಗ್ಲಿಷ್‌ಗೆ ಅನುವಾದಿಸಿರುವುದು ಅನುವಾದದ ಇತಿಹಾಸದಲ್ಲೇ ಒಂದು ಮೈಲುಗಲ್ಲು ಡಾ.ವನಮಾಲಾ ವಿಶ್ವನಾಥ ಅವರ ಸಾಧನೆಯನ್ನು ಬಣ್ಣಿಸಿದರು.
ಇದೇ ವೇಳೆ ಡಾ.ವನಮಾಲ ವಿಶ್ವನಾಥ ಅವರಿಗೆ ಶ್ರೀಲೇಖಾ ಪ್ರಶಸ್ತಿ ಹಾಗೂ ಇಂದಿರಾ ಸುಂದರ್ ರವರಿಗೆ ಪ್ರೇಮಾಭಟ್ ಮತ್ತು ಎಸ್.ಭಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ, ಕಾರ್ಯದರ್ಶಿ ನಾಗರತ್ನ ಚಂದ್ರಶೇಖರ್, ಜಿ.ವಿ.ನಿರ್ಮಲಾ, ರೂಪಲೇಖಾ, ಪ್ರೇಮಾಭಟ್ ಉಪಸ್ಥಿತರಿದ್ದರು.







