ಕರ್ನಾಟಕದಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಇಳಿಕೆ: ಸಿಎಜಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.8: ಇಡೀ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಶೇ ಐದು, ಅದರಲ್ಲೂ ದಕ್ಷಿಣ ಭಾರತವನ್ನು ನೋಡಿದರೆ ಕರ್ನಾಟಕದಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಬಹಳಷ್ಟು ಕಮ್ಮಿ ಇದೆ ಎಂದು ಭಾರತೀಯ ಲೆಕ್ಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರ ವರದಿ (ಸಿಎಜಿ) ಹೇಳಿದೆ.
ರಾಜ್ಯದಲ್ಲಿ 95 ಸಾವಿರ ಪೊಲೀಸರಿದ್ದು, ಮಹಿಳೆಯರ ಸಂಖ್ಯೆ ಐದು ಸಾವಿರ. 2017ರ ಮಾರ್ಚ್ನಲ್ಲಿ ಸಿಎಜಿ ಅಧಿವೇಶನದಲ್ಲಿ ಮಂಡಿಸಿದ ವರದಿಯಲ್ಲಿ ಈ ವಿಷಯ ಪ್ರಕಟವಾಗಿದೆ. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು. ಮಹಿಳಾ ಪೊಲೀಸರ ಪ್ರಮಾಣ ಹೆಚ್ಚಿಸುವುದಕ್ಕೆ ಆದ್ಯತೆ ನೀಡುವಂತೆ ಸಿಎಜಿ ಶಿಫಾರಸು ಮಾಡಿದೆ.
ದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಪ್ರಮಾಣ ಶೇ ಏಳು. ತಮಿಳುನಾಡು, ಮಹಾರಾಷ್ಟ್ರ, ಕೇರಳಗಳಲ್ಲಿ ತಲಾ ಶೇ 11, ಶೇ 12, ಶೇ 6 ಇದೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವ ಬಗ್ಗೆ ಗೃಹ ಸಚಿವಾಲಯ ಗಮನ ಹರಿಸಿ ಸಂಖ್ಯೆ ಹೆಚ್ಚಿಸುವಂತೆ ಪದೇ ಪದೆ ನಿರ್ದೇಶನ ನೀಡಿದ್ದರೂ ಪ್ರಯೋಜನವಾಗಿಲ್ಲ. ಪೊಲೀಸ್ ಇಲಾಖೆಯಲ್ಲಿ ಶೇ 33 ರಷ್ಟು ಮಹಿಳೆಯರನ್ನು ನಿಯೋಜಿಸುವ ಗುರಿ ಗೃಹ ಸಚಿವಾಲಯಕ್ಕಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ನಲ್ಲಿ ಪೊಲೀಸ್ ಇಲಾಖೆಗೆ ಶೇ 25ರಷ್ಟು ಮಹಿಳೆಯರನ್ನು ನಿಯೋಜಿಸುವುದಾಗಿ ಪ್ರಕಟಿಸಿದ್ದರು. ಕರ್ನಾಟಕದಲ್ಲಿ ಅಗತ್ಯಕ್ಕೆ ತಕ್ಕಷ್ಟು ಪೊಲೀಸ್ ಸಿಬ್ಬಂದಿ ಇಲ್ಲ. ಒಂದು ಲಕ್ಷ ಜನಸಂಖ್ಯೆಗೆ 183 ಪೊಲೀಸರು ಇರಬೇಕೆಂಬ ನಿರ್ದೇಶನವಿದೆ. ಆದರೆ ಒಂದು ಲಕ್ಷ ಜನಸಂಖ್ಯೆಗೆ ಕೇವಲ 145 ಪೊಲೀಸರಿದ್ದಾರೆ. ವಿಶ್ವಸಂಸ್ಥೆ ಪ್ರಕಾರ ಒಂದು ಲಕ್ಷ ಜನಸಂಖ್ಯೆಗೆ 222 ಪೊಲೀಸರು ಬೇಕು. ದೇಶದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 183 ಪೊಲೀಸರಿದ್ದಾರೆ.







