ಹಸಿದ ಹೊಟ್ಟೆಗೆ ಅನ್ನ ನೀಡುವ ‘ರೋಟಿ ಬ್ಯಾಂಕ್’ ಅಭಿಯಾನದ ಬಗ್ಗೆ ತಿಳಿದಿದೆಯೇ ?
ನಿವೃತ್ತ ಐಪಿಎಸ್ ಅಧಿಕಾರಿಯ ಮಾದರಿ ಕಾರ್ಯ

ಮುಂಬೈ, ಜು.8: ಪ್ರತೀದಿನ ಹಸಿದ ಹೊಟ್ಟೆಯಲ್ಲೇ ಇರುವ ದೇಶದ ಮಿಲಿಯಾಂತರ ಪ್ರಜೆಗಳ ನೆರವಿಗಾಗಿ ನಿವೃತ್ತ ಐಪಿಎಸ್ ಅಧಿಕಾರಿ ಡಿ.ಶಿವಾನಂದನ್ ‘ರೋಟಿ ಬ್ಯಾಂಕ್’ ಎಂಬ ವಿನೂತನ ಅಭಿಯಾನವನ್ನು ಆರಂಭಿಸಿದ್ದಾರೆ.
ಮುಂಬೈಯಲ್ಲಿರುವ ಹೋಟೆಲ್, ಕ್ಲಬ್‌ಗಳಲ್ಲಿ ಔತಣಕೂಟಗಳಲ್ಲಿ ಮಿಕ್ಕುಳಿಯುವ ಆಹಾರವನ್ನು ಸಂಗ್ರಹಿಸಿ, ಈ ಆಹಾರಗಳು ಹಾಳಾಗುವ ಮುನ್ನ ಅವನ್ನು ವ್ಯಾನ್‌ಗಳ ಮೂಲಕ ಹಸಿದ ಜನರಿಗೆ ತಲುಪಿಸುವ ಯೋಜನೆ ಇದಾಗಿದೆ. ಮುಂಬೈಯ ಪ್ರಸಿದ್ಧ ‘ಡಬ್ಬಾವಾಲಾ’ಗಳ ಸಹಯೋಗದಲ್ಲಿ ನಡೆಯುವ ಈ ಅಭಿಯಾನಕ್ಕೆ ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ ಡಿ.ಶಿವಾನಂದನ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚಾಲನೆ ನೀಡಿದ್ದರು. ಲಂಡನ್‌ನಲ್ಲಿ ನೆಲೆಸಿರುವ ಮುಂಬೈ ಮೂಲದ ಉದ್ಯಮಿ ನಿತಿನ್ ಖಾನಾಪುರ್‌ಕರ್ ಎಂಬವರು ಕೂಡಾ ಈ ಅಭಿಯಾನಕ್ಕೆ ನೆರವಾಗಲು ಮುಂದೆ ಬಂದಿದ್ದು, ದಿನವಡೀ ಕಾರ್ಯ ನಿರ್ವಹಿಸುವ ಹೆಲ್ಪ್‌ಲೈನ್ ನಂಬರ್‌ಗೆ ಚಾಲನೆ ನೀಡಿದ್ದಾರೆ.
ದೇಶದಲ್ಲಿ ಸುಮಾರು 20 ಕೋಟಿಯಷ್ಟು ಜನತೆ ಉಪವಾಸ ಬೀಳುತ್ತಿದ್ದು, ಇದರಲ್ಲಿ ಮುಂಬೈಯ ಜನತೆ ಅಧಿಕ ಪ್ರಮಾಣದಲ್ಲಿದ್ದಾರೆ. ಭಾರತದಲ್ಲಿ ಪ್ರತೀ ದಿನ ಸುಮಾರು 1.8 ಲಕ್ಷ ಟನ್‌ಗಳಷ್ಟು ಆಹಾರ ವ್ಯರ್ಥವಾಗುತ್ತಿದೆ ಎಂದು ಶಿವಾನಂದನ್ ತಿಳಿಸಿದ್ದಾರೆ.
ಹೋಟೆಲ್‌ಗಳಲ್ಲಿ ಹೆಚ್ಚಾಗಿ ಉಳಿದಿರುವ ಆಹಾರಗಳನ್ನು ಹೊರಗಿನವರಿಗೆ ಹಂಚಲು ಕಾನೂನು ಸಮಸ್ಯೆ ಅಡ್ಡಿಯಾಗುತ್ತದೆ. ಆದ್ದರಿಂದ ಎನ್‌ಜಿಒ ಸಂಸ್ಥೆಯ ಮೂಲಕ ಇದನ್ನು ಕಾರ್ಯಗತಗೊಳಿಸಲು ನಾವು ಮುಂದಾಗಿದ್ದು, ಇದಕ್ಕೆ ವಿವಿಧೆಡೆಯಿಂದ ಉತ್ತಮ ಪ್ರೋತ್ಸಾಹ ಲಭಿಸಿದೆ ಎಂದವರು ತಿಳಿಸಿದ್ದಾರೆ. ಆಹಾರ ಸಂಗ್ರಹಿಸಿ ಅಗತ್ಯವಿರುವವರಿಗೆ ಪೂರೈಸಲು ಜಿಪಿಎಸ್ ವ್ಯವಸ್ಥೆಯಿರುವ ಎರಡು ವಾಹನಗಳಿವೆ. ಇವು ರಸ್ತೆ, ಕೊಳೆಗೇರಿ ಮತ್ತು ಆಸ್ಪತ್ರೆಗಳ ಸುತ್ತ ಸಂಚರಿಸಿ ಅಗತ್ಯವಿರುವವರಿಗೆ ಆಹಾರ ಪೂರೈಸುತ್ತದೆ. ಇದುವರೆಗೆ ನಗರದ ಸುಮಾರು 75,000 ಜನರನ್ನು ನಾವು ತಲುಪಿದ್ದೇವೆ. ಈ ಕಾರ್ಯದ ಮೂಲಕ ಹಸಿದ ಜನರಲ್ಲಿ ವಿಶ್ವಾಸ ಮೂಡಿಸಲು ನಾವು ಯಶಸ್ವಿಯಾಗಿದ್ದೇವೆ ಎಂದು ಶಿವಾನಂದನ್ ತಿಳಿಸಿದ್ದಾರೆ.
ಚಪಾತಿ, ಪರೋಟ, ಬ್ರೆಡ್, ಅನ್ನ, ತರಕಾರಿ ಇತ್ಯಾದಿಗಳನ್ನು ಹೋಟೆಲ್‌ಗಳಿಂದ ಸಂಗ್ರಹಿಸಿ 60ರಿಂದ 90 ನಿಮಿಷದ ಒಳಗೆ ಹಂಚಲಾಗುತ್ತದೆ. ಹಸಿದ ವ್ಯಕ್ತಿಗಳಿಗೆ ಆಹಾರ ಒದಗಿಸುವುದು ನಮ್ಮ ಪ್ರಧಾನ ಉದ್ದೇಶವಾಗಿದೆ ಎಂದವರು ತಿಳಿಸಿದ್ದಾರೆ. ಚೆನ್ನೈಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಆಹಾರ ಪೋಲು ಮಾಡಬೇಡಿ’ ಎಂಬ ಅಭಿಯಾನದಿಂದ ಉತ್ತೇಜಿತನಾಗಿ ರೋಟಿ ಬ್ಯಾಂಕ್ ಯೋಜನೆ ಆರಂಭಿಸಲಾಗಿದೆ. ಬಡವರ ಮಕ್ಕಳಿಗೆ ಆಹಾರ ಹಂಚುವ ಕಾರ್ಯದಲ್ಲಿ ಶ್ರೀಮಂತರ ಮಕ್ಕಳನ್ನು ತೊಡಗಿಸಿಕೊಂಡು ಈ ಮೂಲಕ ಅವರಿಗೆ ಈ ಕಾರ್ಯದಲ್ಲಿ ದೊರಕುವ ಆನಂದವನ್ನು ಅನುಭವಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಶಿವಾನಂದನ್ ತಿಳಿಸಿದ್ದಾರೆ. ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ಶಿವಾನಂದನ್ ಬಳಿಕ ಪೊಲೀಸ್ ಮಹಾನಿರ್ದೇಶಕಾರಿ ಭಡ್ತಿ ಹೊಂದಿದ್ದು 2011ರಲ್ಲಿ ನಿವೃತ್ತರಾಗಿದ್ದರು.
ಸಂಪರ್ಕ ಕೊಂಡಿ
ಮುಂಬೈ ನಗರಕ್ಕೆ ಎರಡು ಮುಖಗಳಿವೆ. ಒಂದು ಬದಿಯಲ್ಲಿ ಹೋಟೆಲ್, ಕ್ಲಬ್, ಔತಣಕೂಟಗಳಲ್ಲಿ ಆಹಾರ ವ್ಯರ್ಥವಾಗಿ ಹೋದರೆ ಇನ್ನೊಂದು ಬದಿಯಲ್ಲಿ ಬರಿಹೊಟ್ಟೆಯಲ್ಲಿ ಮಲಗುವ ಬಡವರಿದ್ದಾರೆ. ಇವರಿಬ್ಬರ ನಡುವಿನ ಸರಪಳಿಯಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮುಂಬೈಯ ಡಬ್ಬಾವಾಲಾಗಳ ಸಂಘದ ವಕ್ತಾರ ಸುಭಾಷ್ ತಲೇಕರ್ ತಿಳಿಸಿದ್ದಾರೆ.
ವ್ಯಾನ್‌ಗಳಲ್ಲಿ ಆಹಾರ ಸಂಗ್ರಹಿಸಿ ವಾರದ ಇತರ ದಿನಗಳಲ್ಲಿ ಸುಮಾರು 300ರಿಂದ 400 ಜನರಿಗೆ, ವಾರಾಂತ್ಯದ ದಿನಗಳಲ್ಲಿ ಸುಮಾರು 700ರಿಂದ 800 ಜನರಿಗೆ ಹಂಚುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.







