ಶೋಷಿತ ಸಮುದಾಯಗಳ ಶೈಕ್ಷಣಿಕ ಅಭಿವೃದ್ಧಿಗೆ 25 ಎಕರೆ ಜಾಗ ಮೀಸಲಿಡಿ: ವೀರಭದ್ರ ಚನ್ನಮಲ್ಲ ಸ್ವಾಮೀಜಿ ಒತ್ತಾಯ

ಬೆಂಗಳೂರು, ಜು.8: ರಾಜ್ಯ ಸರಕಾರ ಶೋಷಿತ ಸಮುದಾಯದ ಪ್ರತಿ ಜಾತಿಯ ಶೈಕ್ಷಣಿಕ ಅಭಿವೃದ್ಧಿಗೆ ಬೆಂಗಳೂರಿನಲ್ಲಿ 25ಎಕರೆ ಜಾಗದಲ್ಲಿ ಕೊಟ್ಟು, ಎಂಜನಿಯರಿಂಗ್, ಮೆಡಿಕಲ್ ಕಾಲೇಜು ಸ್ಥಾಪನೆಗೆ ಆರ್ಥಿಕ ನೆರವು ನೀಡಬೇಕಾಗಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಒತ್ತಾಯಿಸಿದರು.
ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ) ಸೇವಾ ಸಂಘ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ‘ದಾದಾ-ಮೋಲ ಬಂಜಾರ ಕಲಾಮೇಳ-2018 ಕಾರ್ಯಕ್ರಮದಲ್ಲಿ ಭಾಗವವಹಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದವರಲ್ಲಿ ಶೋಷಿತ ಶ್ರಮಜೀವಿಗಳ ಪಾಲು ದೊಡ್ಡ ಪ್ರಾಮಾಣದಲ್ಲಿದೆ. ಆದರೂ, ಸ್ವಾತಂತ್ರ ನಂತರದಲ್ಲಿ ಆ ಸಮುದಾಯಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಈ ಬಗ್ಗೆ ಈಗಿನ ಸರಕಾರದ ಜನಪ್ರತಿನಿಧಿಗಳು ಗಂಭೀರವಾಗಿ ಚಿಂತಿಸಿ, ಶೋಷಿತ ಸಮುದಾಯ ಕನಿಷ್ಟ ಶೈಕ್ಷಣಿಕವಾಗಿಯಾದರೂ ಮುನ್ನಲೆಗೆ ಬರುವ ನಿಟ್ಟಿನಲ್ಲಿ ಕಾರ್ಯ ಯೋಜನೆಗಳನ್ನು ರೂಪಿಸಬೇಕೆಂದು ಅವರು ಮನವಿ ಮಾಡಿದರು.
ದಲಿತ, ಹಿಂದುಳಿದ ಹಾಗೂ ಬುಡಕಟ್ಟು ಸಮುದಾಯದ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಅದರಲ್ಲೂ ತಾಂಡಗಳಲ್ಲಿ ವಾಸಿಸುತ್ತಿರುವ ಬಂಜಾರ ಸಮುದಾಯ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೆ, ತುತ್ತು ಅನ್ನಕ್ಕಾಗಿ ತಮ್ಮ ಮಕ್ಕಳನ್ನೆ ಮಾರಾಟ ಮಾಡಿರುವಂತಹ ಹಲವು ಪ್ರಕರಣಗಳು ನಡೆದಿವೆ. ಹೀಗಾಗಿ ಸರಕಾರ ಆದ್ಯತೆಯ ಮೇರೆಗೆ ಬಂಜಾರ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕೆಂದು ಅವರು ಒತ್ತಾಯಿಸಿದರು.
ಶೋಷಿತರಲ್ಲಿ ಒಗ್ಗಟ್ಟಿಲ್ಲ: ಸರಕಾರ ಹಾಗೂ ಸಮಾಜದ ನಿರ್ಲಕ್ಷಕ್ಕೆ ಒಳಗಾಗಿರುವ ಶೋಷಿತ ಸಮುದಾಯ ಒಗ್ಗಟ್ಟಿನಿಂದ ಒಂದು ವೇದಿಕೆಯಲ್ಲಿ ನೆಲೆ ನಿಂತು, ತಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರದ ಮೇಲೆ ಒತ್ತಡ ಹಾಕಬೇಕಾಗಿತ್ತು. ಆದರೆ, ಶೋಷಿತ ಸಮುದಾಯ ಒಗ್ಗಟ್ಟು ಪ್ರದರ್ಶಿಸುವಲ್ಲಿ ವಿಫಲವಾಗಿವೆ. ಇನ್ನು ಮುಂದಾದರು ಶೋಷಿತ ಸಮುದಾಯಗಳ ನಾಯಕರು ‘ಶಿಕ್ಷಣ, ಸಂಘಟನೆ ಹಾಗೂ ಹೋರಾಟ’ವನ್ನು ಉಸಿರಾಗಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ಅವರು ಆಶಿಸಿದರು.
ಮಾಜಿ ಸಚಿವ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ರಾಜ್ಯದಲ್ಲಿ ಬಂಜಾರ ಸಮುದಾಯ ಸಮಾಜದ ನಿರ್ಲಕ್ಷಕ್ಕೆ ಒಳಗಾಗಿ, ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗದೆ ವರ್ಷಕ್ಕೆ ಎರಡು, ಮೂರು ಬಾರಿ ವಲಸೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮುದಾಯದ ಮಹಿಳೆಯರು ಅತ್ಯಾಚಾರ ಸೇರಿದಂತೆ ಪ್ರಾಣಾಪಾಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ವಲಸೆಯನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರಕಾರ ಪ್ರತಿ ಕುಟುಂಬಕ್ಕೆ ವ್ಯವಸಾಯ ಮಾಡಲು 3ಎಕರೆ ಜಮೀನು ಕೊಡಬೇಕೆಂದು ಒತ್ತಾಯಿಸಿದರು.
ಬಂಜಾರ ಸಮುದಾಯದ ಅಭಿವೃದ್ಧಿಗಾಗಿ ‘ತಾಂಡ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಲಾಗಿದೆ. ಸದ್ಯ ನಿಗಮದಲ್ಲಿ ಅಧ್ಯಕ್ಷ ಹುದ್ದೆ ಖಾಲಿಯಿದ್ದು, ಸಮುದಾಯದ ಕುರಿತು ಕಾಳಜಿಯಿರುವ ವ್ಯಕ್ತಿಯನ್ನು ಅಧ್ಯಕ್ಷ ಹುದ್ದೆಗೆ ನೇಮಿಸಬೇಕು. ಹಾಗೂ ಬಂಜಾರ ಸಮುದಾಯ ಭವನದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಸರಕಾರ ಅರ್ಥಿಕ ನೆರವು ಪಡೆದು ಈ ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ಸ್ಮರಣ ಸಂಚಿಕೆ ಹಾಗೂ ಗ್ರಹಿಕೆ ಗೊಂಚಲು ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಈ ವೇಳೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ್ ಜಾದವ್, ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಮಾಜಿ ಸಚಿವ ಕೆ.ಶಿವಮೂರ್ತಿ, ಸಮುದಾಯದ ಶಿವಪ್ರಸಾದ್ ಸ್ವಾಮೀಜಿ ಮತ್ತಿತರರಿದ್ದರು.
ಬಂಜಾರ ಭಾಷೆಯ ಬೆಳವಣಿಗೆಗೆ ‘ಬಂಜಾರ ಭಾಷಾ ಅಕಾಡೆಮಿ’ಯನ್ನು ಸ್ಥಾಪಿಸುವುದು ತುರ್ತು ಅಗತ್ಯವಾಗಿದೆ. ಬಂಜಾರ ಭಾಷೆಯನ್ನು ದೇಶಾದ್ಯಂತ ಕೋಟ್ಯಂತರ ಜನತೆ ದಿನ ಬಳಕೆಯ ಭಾಷೆಯಾಗಿ ಬಳಸುತ್ತಿದ್ದಾರೆ. ಇಂತಹ ಭಾಷೆಯ ಉಳಿಸುವುದು ಸರಕಾರದ ಆದ್ಯ ಕರ್ತವ್ಯವಾಗಬೇಕಿದೆ.
-ವೀರಭದ್ರ ಚನ್ನಮಲ್ಲ ಸ್ವಾಮೀಜಿ ನಿಡುಮಾಮಿಡಿ ಮಠ







