ಜೈಲಿನಲ್ಲಿರುವ ಸಂಘಪರಿವಾರದ ನಾಯಕರನ್ನು ಭೇಟಿಯಾದ ಕೇಂದ್ರ ಸಚಿವ
ರಾಮನವಮಿ ಹಿಂಸಾಚಾರ ಪ್ರಕರಣ

ಪಾಟ್ನಾ, ಜು.8: ಕಳೆದ ವರ್ಷ ರಾಮ ನವಮಿಯ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಕಳೆದ ವಾರ ಬಂಧಿತರಾಗಿ ನವಾಡ ಜೈಲಿನಲ್ಲಿ ಇರುವ ಬಲಪಂಥೀಯ ಕೆಲವು ನಾಯಕರನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ರವಿವಾರ ಭೇಟಿಯಾಗಿದ್ದಾರೆ. ಗೋರಕ್ಷಣೆ ಹೆಸರಲ್ಲಿ ಮಾಂಸ ವ್ಯಾಪಾರಿಯನ್ನು ಥಳಿಸಿ ಹತ್ಯೆಗೈದ ಪ್ರಕರಣದ ಅಪರಾಧಿಗಳನ್ನು ಸಚಿವ ಜಯಂತ್ ಸಿನ್ಹಾ ತನ್ನ ಮನೆಯಲ್ಲಿ ಗೌರವಿಸಿದ ದಿನದ ಬಳಿಕ ಗಿರಿರಾಜ್ ಸಿಂಗ್ ಈ ಭೇಟಿ ನೀಡಿರುವುದು ಮತ್ತೆ ವಿವಾದಕ್ಕೆ ಕಾರಣವಾಗಿದೆ. 2017 ಎಪ್ರಿಲ್‌ನಲ್ಲಿ ರಾಮನವಮಿ ಘರ್ಷಣೆ ನಡೆದ ಬಳಿಕ ಹಲವು ಜಿಲ್ಲೆಗಳ ಕೆಲವು ನಾಯಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಘರ್ಷಣೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ಬಜರಂಗ ದಳದ ಜಿತೇಂದ್ರ ಪ್ರತಾಪ್ ಹಾಗೂ ವಿಶ್ವಹಿಂದೂ ಪರಿಷತ್‌ನ ಕೈಲಾಸ್ ವಿಶ್ವಕರ್ಮ ಅವರನ್ನು ಬಂಧಿಸಲಾಗಿತ್ತು.
ಧಾರ್ಮಿಕ ಪೋಸ್ಟರ್ ಹರಿದಿರುವುದು ಪತ್ತೆಯಾದ ಬಳಿಕ 2017 ಎಪ್ರಿಲ್‌ನಲ್ಲಿ ಆರಂಭವಾದ ಹಿಂಸಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಹಲವು ನಾಯಕರನ್ನು ಬಂಧಿಸಿರುವುದರ ಬಗ್ಗೆ ಬಿಜೆಪಿ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದೆ. ನವಾಡದ ಕಾರಾಗೃಹಕ್ಕೆ ಭೇಟಿ ನೀಡಿರುವ ಗಿರಿರಾಜ್ ಸಿಂಗ್, ಹಿಂಸಾಚಾರದಲ್ಲಿ ಪಾಲ್ಗೊಂಡಿರುವುದಾಗಿ ಇಬ್ಬರು ನಾಯಕರ ವಿರುದ್ಧ ಆರೋಪಿಸಿರುವುದು ದುರಾದೃಷ್ಟಕರ ಎಂದು ಹೇಳಿದ್ದಾರೆ.





