ಕರಾವಳಿಯ ವಿವಿಧೆಡೆ ಧಾರಾಕಾರ ಮಳೆ

ಮಂಗಳೂರು, ಜು.8: ಕರಾವಳಿ ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಂಗಳೂರು ನಗರದ ತಗ್ಗು ಪ್ರದೇಶಗಳಾದ ಕೊಟ್ಟಾರಚೌಕಿ, ಕೂಳೂರು, ಜೆಪ್ಪಿನಮೊಗರು, ಪಂಪ್‌ವೆಲ್ ಪ್ರದೇಶದಲ್ಲಿ ಮಳೆ ನೀರು ನಿಂತಿದ್ದು, ರಸ್ತೆಗಳೆಲ್ಲ ಮಳೆನೀರಿನಿಂದ ಜಲವೃತಗೊಂಡಿವೆ.
ನಗರದ ಪಂಪ್‌ವೆಲ್-ತೊಕ್ಕಟ್ಟು ಮಾರ್ಗದ ರಸ್ತೆ ಸೇರಿದಂತೆ ಬೋಳಾರದ ಶಾದಿಮಹಲ್ ಹತ್ತಿರ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗಿತ್ತು. ಶಾದಿಮಹಲ್‌ನಲ್ಲಿ ಮದುವೆ ಕಾರ್ಯಕ್ರಮವೊಂದು ನಡೆಯುತ್ತಿತ್ತು ಎನ್ನಲಾಗಿದ್ದು, ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಧಾರಾಕಾರ ಸುರಿದ ಮಳೆೆಯಿಂದಾಗಿ ನಗರದ ಕೊಟ್ಟಾರಚೌಕಿ-ಉರ್ವಸ್ಟೋರ್ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆನೀರು ಹರಿಯಿತು. ವೇಗವಾಗಿ ಚಲಾಯಸುತ್ತಿದ್ದ ವಾಹನಗಳಿಂದಾಗಿ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಪಾದಚಾರಿಗಳು ಸಂಕಷ್ಟವನ್ನು ಎದುರಿಸಿದರು.
ಪುತ್ತೂರು ತಾಲೂಕಿನ ನೆತ್ತಣಿಗೆ ಮುದನೂರಿನಲ್ಲಿ ಅತಿಹೆಚ್ಚು 187.5 ಮಿ.ಮೀ. ಮಳೆ ಸುರಿದಿದೆ. ಮಂಗಳೂರು ತಾಲೂಕಿನ ಮುತ್ತೂರು 36 ಮಿ.ಮೀ., ಕುಪ್ಪೆಪದವು 33 ಮಿ.ಮೀ., ಕಂದವಾರ 32.5 ಮಿ.ಮೀ., ಗಂಜಿಮಠ 32 ಮಿ.ಮೀ., ಪಿಲಿಕುಳ 26 ಮಿ.ಮೀ., ನೀರ್‌ಮಾರ್ಗ 20 ಮಿ.ಮೀ., ಬೊಳಿಯಾರ್ 19.5 ಮಿ.ಮೀ., ಮುನ್ನೂರು 16 ಮಿ.ಮೀ., ಮಂಗಳೂರು(ಬಿ) ಮಳೆ ಬಿದ್ದಿದೆ. ಉಳಿದಂತೆ ಬಂಟ್ವಾಳ ತಾಲೂಕಿನ ಕವಲಮದೂರು 13 ಮಿ.ಮೀ., ಕವಲಪದರು 13 ಮಿ.ಮೀ., ಸರಪಡಿ 33.5 ಮಿ.ಮೀ., ಪೆರಣೆ 31.5 ಮಿ.ಮೀ., ಉಳ್ಳ 30 ಮಿ.ಮೀ., ಪಣೆಮಂಗಳೂರು 24 ಮಿ.ಮೀ., ಪಡಗಬೆಳ್ಳೂರು 22.5 ಮಿ.ಮೀ.,ಐರಾ 27 ಮಿ.ಮೀ., ಇರ್ವತ್ತೂರು 15 ಮಿ.ಮೀ., ಪಂಜಿಕಲ್ಲು 27.5 ಮಿ.ಮೀ. ಮಳೆಯಾಗಿದೆ.
ಮುಂದಿನ ಎರಡು ದಿನಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.







