ಎಐಎಡಿಎಂಕೆ ಶಾಸಕರ ಅಮಾನತು ಪ್ರಕರಣ: ಭಿನ್ನ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗೆ ಬೆದರಿಕೆ !

ನ್ಯಾಯಮೂರ್ತಿ ಎಂ. ಸುಂದರ್
ಹೊಸದಿಲ್ಲಿ, ಜು. 8: ಹದಿನೆಂಟು ಎಐಎಡಿಎಂಕೆ ಶಾಸಕರ ಅಮಾನತು ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿದ್ದ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಂ. ಸುಂದರ್ ಅವರು ಅನಾಮಿಕ ಬೆದರಿಕೆ ಪತ್ರ ಸ್ವೀಕರಿಸಿದ್ದಾರೆ. ‘‘ಕುಟುಂಬದೊಂದಿಗೆ ನಿಮ್ಮನ್ನು ಹತ್ಯೆ ಮಾಡಲಾಗುವುದು’’ ಎಂದು ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ. ಈ ಬೆದರಿಕೆ ವಿಚಾರ ಬೆಳಕಿಗೆ ಬಂದ ಕೂಡಲೇ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಚೆನ್ನೈ ಪೊಲೀಸ್ ಆಯುಕ್ತ ಎ.ಕೆ. ವಿಶ್ವನಾಥನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕೂಡಲೇ ಆಯುಕ್ತರು ನ್ಯಾಯಮೂರ್ತಿ ಸುಂದರ್ ಹಾಗೂ ಅವರ ಕುಟುಂಬಕ್ಕೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಒದಗಿಸಿದ್ದಾರೆ.
ಸುಂದರ್ ಅವರನ್ನು ಎಪ್ರಿಲ್ 1ರಿಂದ ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠಕ್ಕೆ ನಿಯೋಜಿಸಿದ್ದ ಹಿನ್ನೆಲೆಯಲ್ಲಿ ಈ ಬೆದರಿಕೆಯನ್ನು ಎಲ್ಲ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿನ ಗ್ರೀನ್ವೇ ರಸ್ತೆಯಲ್ಲಿರುವ ಅಧಿಕಾರಿಗಳ ಬಂಗಲೆಯಲ್ಲಿ ಅವರ ಪತ್ನಿ ಹಾಗೂ ಪುತ್ರಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧಿಕಾರದಲ್ಲಿದ್ದ ಪಕ್ಷದ ವಿರುದ್ಧ ತೀರ್ಪು ನೀಡಿರುವುದರಿಂದ ಘೋರ ಪರಿಣಾಮ ಎದುರಿಸಬೇಕು ಎಂದು ನ್ಯಾಯಮೂರ್ತಿ ಸುಂದರ್ ಅವರು ಸ್ವೀಕರಿಸಿದ ಪತ್ರದಲ್ಲಿ ಹೇಳಲಾಗಿದೆ. ನಿಮ್ಮ ನಿವಾಸಕ್ಕೆ ಸಾಕಷ್ಟು ಸಂಖ್ಯೆಯ ಪೊಲೀಸರನ್ನು ನಿಯೋಜಿಸಿದರೂ ಕುಟುಂಬದ ಸದಸ್ಯರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಕೂಡ ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ.
ನ್ಯಾಯಮೂರ್ತಿ ಸುಂದರ್ ಅವರ ನಿವಾಸಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ನಿವಾಸಕ್ಕೆ ಹೋಗುವ ರಸ್ತೆಯಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಭೇಟಿ ಮಾಡುತ್ತಿರುವವರನ್ನು ಪರಿಶೀಲನೆ ನಡೆಸಲು ಪೊಲೀಸರನ್ನು ನಿಯೋಜಿಸಲಾಗಿದೆ.







