ದ್ವೈವಾರ್ಷಿಕ ನೀಟ್ ಪರೀಕ್ಷೆಗೆ ಯುಎಇ ಶ್ಲಾಘನೆ

ದುಬೈ, ಜು.8: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮತ್ತು ಜಂಟಿ ಪ್ರವೇಶ ಪರೀಕ್ಷೆಗಳನ್ನು (ಜೆಇಇ) ವರ್ಷದಲ್ಲಿ ಎರಡು ಬಾರಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್‌ಟಿಎ) ರಚಿಸಿರುವ ಭಾರತದ ಕ್ರಮವನ್ನು ಯುಎಇಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶ್ಲಾಘಿಸಿದ್ದಾರೆ.
ರವಿವಾರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೆಕರ್ ಮಾಡಿರುವ ಘೋಷಣೆಗೆ ಯುಎಇಯಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಈ ಪರೀಕ್ಷೆಗಳನ್ನು ಕೇಂದ್ರ ಪ್ರೌಡ ಶಿಕ್ಷಣಾ ಮಂಡಳಿ ಆಯೋಜಿಸುತ್ತಿದೆ. ಆದರೆ ಮಂಡಳಿಯು ಪೇಪರ್ ಸೋರಿಕೆಯಂಥ ವಿವಾದಗಳಿಂದ ಸುತ್ತುವರಿದಿದ್ದು ನೂತನ ವ್ಯವಸ್ಥೆಯು ಸಂಪೂರ್ಣ ಸುರಕ್ಷಿತವಾಗಿರಲಿದೆ ಎಂದು ಜಾವಡೆಕರ್ ತಿಳಿಸಿದ್ದಾರೆ. ಸರಕಾರಿ ವೈದ್ಯಕೀಯ ಮತ್ತು ದಂತ ಕಾಲೇಜುಗಳಲ್ಲಿರುವ ಸುಮಾರು 33,000 ಸೀಟ್‌ಗಳಿಗಾಗಿ ನಡೆಯುವ ನೀಟ್ ಪ್ರತಿ ವರ್ಷ ಫೆಬ್ರವರಿ ಮತ್ತು ಮೇನಲ್ಲಿ ನಡೆಯಲಿದೆ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಯುವ ಜೆಇಇ ಪ್ರತಿ ವರ್ಷ ಜನವರಿ ಮತ್ತು ಎಪ್ರಿಲ್‌ನಲ್ಲಿ ನಡೆಯಲಿದೆ. ಈ ಪರೀಕ್ಷೆಗಳು ಸಿಬಿಎಸ್ ನಡೆಸುವ ವಾರ್ಷಿಕ ಪರೀಕ್ಷೆಗಳು ಮುಗಿದ ತಕ್ಷಣ ಆರಂಭವಾಗುವ ಕಾರಣ ಯುಎಇ ಹಾಗೂ ಇತರ ಕೊಲ್ಲಿ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ನೀಟ್ ಮತ್ತು ಜೆಇಇಗೆ ಸಿದ್ಧತೆಗಾಗಿ ಒಂದು ವರ್ಷ ಕಳೆದುಕೊಳ್ಳಬೇಕಾಗುತ್ತಿತ್ತು. ಹಾಗಾಗಿ ಈ ಪರೀಕ್ಷೆಗಳನ್ನು ವರ್ಷದಲ್ಲಿ ಎರಡು ಬಾರಿ ನಡೆಸಲು ಉದ್ದೇಶಿಸಿರುವ ಸರಕಾರದ ಕ್ರಮದಿಂದ ದೀರ್ಘ ಸಮಯವನ್ನು ಪೋಲು ಮಾಡುವುದು ತಪ್ಪುತ್ತದೆ ಎಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಿಳಿಸಿದ್ದಾರೆ.





