ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ: ಪ್ರಮುಖ ಡ್ಯಾಂಗಳ ಒಳಹರಿವಿನಲ್ಲಿ ಹೆಚ್ಚಳ
ಶಿವಮೊಗ್ಗ, ಜು. 7: ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಜಿಲ್ಲೆಯಾದ್ಯಂತ ವರ್ಷಧಾರೆ ಮುಂದುವರಿದಿದ್ದು, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಅಬ್ಬರ ಜೋರಾಗಿದೆ. ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಪ್ರಮುಖ ಜಲಾಶಯಗಳ ಒಳಹರಿವಿಲ್ಲಿ ಹೆಚ್ಚಳ ಕಂಡುಬಂದಿದೆ.
ಜಿಲ್ಲೆಯ ಪ್ರಮುಖ ನದಿಗಳಾದ ತುಂಗಾ, ಭದ್ರಾ, ಶರಾವತಿ, ಕುಮದ್ವತಿ, ದಂಡಾವತಿ ನದಿಗಳ ಹರಿವಿನಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಜಲಾನಯನ ಪ್ರದೇಶದಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿರುವುದರಿಂದ ಲಿಂಗನಮಕ್ಕಿ, ಭದ್ರಾ, ತುಂಗಾ ಜಲಾಶಯಗಳ ನೀರಿನ ಸಂಗ್ರಹದಲ್ಲಿಯೂ ಏರಿಕೆ ಕಂಡುಬಂದಿದೆ.
ಭಾನುವಾರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸನಗರ ತಾಲೂಕಿನ ಯಡೂರಿನಲ್ಲಿ ಅತ್ಯದಿಕ 151 ಮಿಲಿ ಮೀಟರ್ (ಮಿ.ಮೀ.) ವರ್ಷಧಾರೆಯಾಗಿದೆ. ಆಗುಂಬೆಯಲ್ಲಿ 149 ಮಿ.ಮೀ., ಮಾಣಿಯಲ್ಲಿ 122 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 105 ಮಿ.ಮೀ., ಹುಲಿಕಲ್‍ನಲ್ಲಿ 108 ಮಿ.ಮೀ. ವರ್ಷಧಾರೆಯಾಗಿದೆ. ಉಳಿದಂತೆ ಶಿವಮೊಗ್ಗದಲ್ಲಿ 9.6 ಮಿ.ಮೀ., ಭದ್ರಾವತಿಯಲ್ಲಿ 6.4 ಮಿ.ಮೀ., ಬಿ.ಆರ್.ಪಿ.ಯಲ್ಲಿ 6.4 ಮಿ.ಮೀ., ಶಿಕಾರಿಪುರದಲ್ಲಿ 14.4 ಮಿ.ಮೀ., ಸಾಗರದಲ್ಲಿ 65 ಮಿ.ಮೀ., ಲಿಂಗನಮಕ್ಕಿಯಲ್ಲಿ 65 ಮಿ.ಮೀ., ಸೊರಬದಲ್ಲಿ 41.1 ಮಿ.ಮೀ., ತೀರ್ಥಹಳ್ಳಿಯಲ್ಲಿ 63 ಮಿ.ಮೀ. ಮಳೆಯಾಗಿದೆ.
ಡ್ಯಾಂ ವಿವರ: ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1775.55 (ಗರಿಷ್ಠ ಮಟ್ಟ : 1819) ಅಡಿಯಿದೆ. 36,368 ಕ್ಯೂಸೆಕ್ ಒಳಹರಿವಿದ್ದು 246 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1762.35 ಅಡಿ ನೀರು ಸಂಗ್ರಹವಾಗಿತ್ತು.
ಶಿವಮೊಗ್ಗ - ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಡ್ಯಾಂನ ನೀರಿನ ಮಟ್ಟ 152 (ಗರಿಷ್ಠ ಮಟ್ಟ : 186) ಅಡಿಯಿದೆ. 19,715 ಕ್ಯೂಸೆಕ್ ಒಳಹರಿವಿದ್ದು, 224 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ನೀರಿನ ಮಟ್ಟ 124.6 ಅಡಿಯಿತ್ತು.
ಮಾಣಿ ಡ್ಯಾಂನ ನೀರಿನ ಮಟ್ಟ 1902.79 (ಗರಿಷ್ಠ ಮಟ್ಟ: 1952) ಅಡಿಯಿದೆ. 4711 ಕ್ಯೂಸೆಕ್ ಒಳಹರಿವಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1885.89 ಅಡಿಯಿತ್ತು. ಉಳಿದಂತೆ ಗಾಜನೂರಿನ ತುಂಗಾ ಡ್ಯಾಂ ಈಗಾಗಲೇ ಗರಿಷ್ಠ ಮಟ್ಟವಾದ 588 ಅಡಿ ತಲುಪಿದ್ದು, ಪ್ರಸ್ತುತ ಡ್ಯಾಂನ ಒಳಹರಿವು 31,780 ಕ್ಯೂಸೆಕ್ ಇದ್ದು 30,780 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.