ಬೋಳ್ಯ-ಹೆಗ್ಗಣಗುಳಿ ರಸ್ತೆಗೆ ಬಿದ್ದ ಗುಡ್ಡದ ಮಣ್ಣು: ರಸ್ತೆ, ಸೇತುವೆಗೆ ಹಾನಿ; ಗ್ರಾಮಸ್ಥರ ಆತಂಕ

ಬಂಟ್ವಾಳ, ಜು. 9: ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು-ಬೋಳ್ಯ-ಹೆಗ್ಗಣಗುಳಿ ರಸ್ತೆ ಮೇಲೆ ಗುಡ್ಡ ಜರಿದ ಪರಿಣಾಮ ಈ ಹೊಸ ರಸ್ತೆ ಮತ್ತು ಸೇತುವೆಯು ಭಾಗಶಃ ಹಾನಿಯಾಗಿದ್ದು, ಸಂಪೂರ್ಣವಾಗಿ ಹಾನಿಯಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಹೆಗ್ಗಣಗುಳಿಯಿಂದ ಪುಲ್ಲೇರಿವರೆಗೆ ಈ ರಸ್ತೆ ಹಾಗೂ ಸೇತುವೆಯನ್ನು ಕಳೆದ ವರ್ಷ ನಿರ್ಮಿಸಲಾಗಿತ್ತು. ಈ ಸಂದರ್ಭ ದಲ್ಲಿ ಬದಿಯ ಗುಡ್ಡಗಳನ್ನು ಬೇಕಾಬಿಟ್ಟಿಯಾಗಿ ಅಗೆದು ಹಾಕಲಾಗಿದ್ದು, ಇಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯನ್ನು ಕಲ್ಪಿಸದಿರುವುದರಿಂದ ಈ ಬಾರಿಯ ಎಡೆಬಿಡದೆ ಸುರಿಯುವ ಮಳೆಗೆ ಈ ಗುಡ್ಡಗಳು ಜರಿದು ರಸ್ತೆ ಹಾಗೂ ಸೇತುವೆಯ ಮೇಲೆ ಬಿದ್ದಿದೆ. ಇದರಿಂದಾಗಿ ಸಾರ್ವಜನಿಕರ ಮತ್ತು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮಳೆ ನೀರು ಕೂಡಾ ರಸ್ತೆಯಲ್ಲಿ ಹರಿದು ಹೋಗುತ್ತಿದ್ದು, ಈ ರಸ್ತೆ ಕೂಡಾ ಜರಿದು ಬೀಳುವ ಸಂಭವವಿದೆ ಎಂದು ಸ್ಥಳೀಯರು ದೂರಿದ್ದಾರೆ. ಮಳೆ ನೀರು ಮತ್ತು ಗುಡ್ಡ ಜರಿದ ಮಣ್ಣು ಒಟ್ಟಾಗಿ ಸೇತುವೆಯಿಂದ ಹರಿದು ಹೋದಲ್ಲಿ ಇದರ ಪಕ್ಕದ ಗೋಡೆಯು ಕುಸಿದು ಬೀಳುವ ಸಾಧ್ಯತೆಯಿದೆ ಎಂದು ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯ ಗುತ್ತಿಗೆದಾರರು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವ್ದಾರಿಯ ಕಾಮಗಾರಿಯ ಇಂತಹ ದು:ಸ್ಥಿತಿಗೆ ಕಾರಣವಾಗಿದೆ ಸ್ಥಳೀಯರು ಎಂದು ಆರೋಪಿಸಿದ್ದಾರೆ.







