ಬೆಂಗಳೂರು: ಆರು ತಿಂಗಳಿಂದ ವೇತನವಿಲ್ಲದ ಪೌರ ಕಾರ್ಮಿಕ ಆತ್ಮಹತ್ಯೆ
ಕಾರ್ಮಿಕರ ಪ್ರತಿಭಟನೆ, ಇಬ್ಬರು ಪಾಲಿಕೆ ಅಧಿಕಾರಿಗಳ ಅಮಾನತು

ಬೆಂಗಳೂರು, ಜು.9: ವೇತನ ನೀಡದಿದ್ದ ಕಾರಣಕ್ಕೆ ನೊಂದು ಬಿಬಿಎಂಪಿ ಪೌರ ಕಾರ್ಮಿಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಇಲ್ಲಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಮಲ್ಲೇಶ್ವರಂ ನಿವಾಸಿ ಸುಬ್ರಹ್ಮಣ್ಯ(38) ಆತ್ಮಹತ್ಯೆ ಮಾಡಿಕೊಂಡ ಪೌರಕಾರ್ಮಿಕ ಎಂದು ಪೊಲೀಸರು ಗುರುತಿಸಿದ್ದಾರೆ. ಹನ್ನೆರಡು ವರ್ಷಗಳಿಂದ ಬಿಬಿಎಂಪಿಯಲ್ಲಿ ಪೌರಕಾರ್ಮಿಕನಾಗಿ ದುಡಿಯುತ್ತಿದ್ದ ಸುಬ್ರಹ್ಮಣ್ಯ ಅವರಿಗೆ ಕಳೆದ ಆರು ತಿಂಗಳಿನಿಂದ ವೇತನ ನೀಡದೆ, ಕಿರುಕುಳ ನೀಡುತ್ತಿದ್ದರು. ಹೀಗಾಗಿ, ನೊಂದು ರವಿವಾರ ತಡ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಪ್ರತಿಭಟನೆ: ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ, ಇಲ್ಲಿನ ಕೆಸಿ ಜನರಲ್ ಆಸ್ಪತ್ರೆ ಬಳಿ ಜಮಾಯಿಸಿದ ನೂರಾರು ಪೌರಕಾರ್ಮಿಕರು, ಸುಬ್ರಹ್ಮಣ್ಯ ಕುಟುಂಬಸ್ಥರು ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇಬ್ಬರು ಅಮಾನತು: ಪೌರ ಕಾರ್ಮಿಕ ಸುಬ್ರಹ್ಮಣ್ಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಅಮಾನತು ಮಾಡಿದ್ದಾರೆ. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಪೂರ್ವವಲಯದ ಆರೋಗ್ಯಾಧಿಕಾರಿ ಉಮಾಶಂಕರ್ ಹಾಗೂ ಎಇಇ ರಾಜು ಅವರನ್ನು ಆಯುಕ್ತರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಭೇಟಿ: ಕೆಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್ ಸಂಪತ್‌ರಾಜ್, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸ್ಥಳದಲ್ಲೇ 5 ಲಕ್ಷ ರೂ. ಪರಿಹಾರ ಧನ ಘೋಷಿಸಿದರು.







