ವಿಧಾನಸೌಧ ಮುತ್ತಿಗೆ: ರೈತ ಮುಖಂಡರು ವಶ
ಯಶಸ್ವಿ ಸಂಧಾನ; ರಸ್ತೆ ತಡೆ ಹಿಂಪಡೆದ ರೈತರು

ಬೆಂಗಳೂರು, ಜು. 9: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರನ್ನು ಪೋಲಿಸರು ವಶಕ್ಕೆ ಪಡೆದು ಕೆಲ ಕಾಲದ ನಂತರ ಬಿಡುಗಡೆಗೊಳಿಸಿದರು.
ಸೋಮವಾರ ವಿವಿಧ ಜಿಲ್ಲೆಗಳಿಂದ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ರೈತರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಮೌರ್ಯ ವೃತ್ತದಿಂದ ವಿಧಾನಸೌಧದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ರೈತರ ಮತ್ತು ಪೊಲೀಸರ ಮಧ್ಯೆ ವಾಕ್ಸಮರ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಥಳಕ್ಕಾಗಮಿಸಿ, ನಮ್ಮ ಸಮಸ್ಯೆಗಳನ್ನು ಆಲಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಅಲ್ಲಿಯವರೆಗೂ ನಮ್ಮ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ತೀವ್ರತೆ ಅರಿತ ಪೊಲೀಸರು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಇನ್ನಿತರ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ರಾಜಕೀಯ ಬೇಡ: ರೈತರ ಬೆಳೆಗೆ ಸೂಕ್ತ ಬೆಲೆ ನಿಗದಿಪಡಿಸಿಲ್ಲ. ಮತಕ್ಕಾಗಿ ಎಲ್ಲ ರಾಜಕಿಯ ಪಕ್ಷಗಳು ಸಾಲ ಮನ್ನಾ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.
ರಾಜ್ಯ ಸರಕಾರ ರೈತರ ಸಮಸ್ಯೆಗಳನ್ನು ಆಲಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ನಮ್ಮ ಹೋರಾಟ ಕೈಬಿಡುವುದಿಲ್ಲ. ರಾಜ್ಯದ ಎಲ್ಲ ಭಾಗಗದ ರೈತರು ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸರು ವಶಕ್ಕೆ ಪಡೆಯುವ ಮುನ್ನ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಮಾತು ನೀಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದೀಗ ಕೇವಲ 2 ಲಕ್ಷವರೆಗಿನ ಸುಸ್ಥಿ ಸಾಲ ಮನ್ನಾ ಮಾಡುವ ಮೂಲಕ ಮಾತು ತಪ್ಪಿದ್ದಾರೆ. ಹೀಗಾಗಿ, ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ಸರಕಾರಿ ನೌಕರರ ವೇತನ ಏರಿಕೆಗೆ, ಉದ್ಯಮಿಗಳಿಗೆ ನೆರವು ನೀಡಲು ಬೊಕ್ಕಸದಲ್ಲಿ ಹಣವಿದೆ. ಆದರೆ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದರೆ ರಾಜ್ಯ ಸರಕಾರಕ್ಕೆ ಆರ್ಥಿಕ ಹೊರೆ ಆಗುತ್ತದೆ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ರಸ್ತೆ ತಡೆ ಹಿಂದಕ್ಕೆ
ಮೈಸೂರು ರಸ್ತೆಯ ಬಿ.ಆರ್.ಗ್ರೌಂಡ್ ಪೊಲೀಸರ ವಶದಲ್ಲಿದ್ದ ರೈತ ಮುಖಂಡರ ಜೊತೆ ಸಚಿವ ಬಂಡೆಪ್ಪ ಕಾಶಂಪುರ ಸಂಧಾನ ಸಭೆ ನಡೆಸಿದ ಬಳಿಕ ರೈತ ಮುಖಂಡರು ಜು.10ಕ್ಕೆ ಕರೆ ನೀಡಿದ್ದ ರಾಜ್ಯಾದ್ಯಂತ ರಸ್ತೆ ತಡೆ ಪ್ರತಿಭಟನೆಯನ್ನು ವಾಪಾಸ್ ಪಡೆದಿದ್ದಾರೆ.
ಈ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಸಚಿವ ಬಂಡೆಪ್ಪ ಕಾಶಂಪುರ ನಮ್ಮೊಂದಿಗೆ ಮಾತುಕತೆ ನಡೆಸಿದ್ದು, ಮಾಹಿತಿ ಕೊರತೆಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರೈತ ಮುಖಂಡರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ ಎಂದು ಮಾಹಿತಿ ನೀಡಿದರು.
ಸರಕಾರಕ್ಕೆ ರೈತ ಮುಖಂಡರ ಸಲಹೆ ಅಗತ್ಯ. ಅಧಿವೇಶನ ಮುಗಿದ ಬಳಿಕ ಸಾಲಮನ್ನಾ ಬಗ್ಗೆ ರೈತ ಮುಖಂಡರೊಡನೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ, ಈ ವಾರದಲ್ಲಿ ನಡೆಯುವ ಬೆಳವಣಿಗೆ ನೋಡಿಕೊಂಡು, ಜು.21ರಂದು ಹಾವೇರಿಯಲ್ಲಿ ಏರ್ಪಡಿಸಿರುವ ಸಮಾವೇಶದಲ್ಲಿ ನಮ್ಮ ಮುಂದಿನ ನಿರ್ಣಯ ಕೈಗೊಳ್ಳಲಾಗುವುದೆಂದರು.







