ಮಂಗಳೂರು: ಬಿಎಸ್ಸೆಎನ್ನೆಎಲ್ ಕಚೇರಿ ಮುಂದೆ ಸಿಐಟಿಯು ಪ್ರತಿಭಟನೆ
ಮಂಗಳೂರು, ಜು.9: ಜಿಲ್ಲೆಯ ಬೇರೆ ಬೇರೆ ಎಕ್ಸ್‌ಚೇಂಜ್‌ಗಳಲ್ಲಿ ದುಡಿಯುತ್ತಿರುವ 90 ಮಂದಿ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವ ಬಿಎಸ್ಸೆಎನ್ನೆಎಲ್ ಆಡಳಿತ ವರ್ಗದ ಕ್ರಮವನ್ನು ಖಂಡಿಸಿ ಬಿಎಸ್ಸೆಎನ್ನೆಎಲ್ ನಾನ್‌ಪರ್ಮಿನೆಂಟ್ ವರ್ಕರ್ಸ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ಸೋಮವಾರ ಪಾಂಡೇಶ್ವರದಲ್ಲಿರುವ ಬಿಎಸ್ಸೆಎನ್ನೆಎಲ್ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಸಂಘದ ಅಧ್ಯಕ್ಷ ಹಾಗೂ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ ಕೆಲಸದಿಂದ ವಜಾಗೊಳಿಸಿರುವುದರಿಂದ ಕಾರ್ಮಿಕರು ಬೀದಿಪಾಲಾಗಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಸಂಸ್ಥೆಗೆ ಉತ್ತಮ ಹೆಸರಿದ್ದು, ಇದರ ಗುತ್ತಿಗೆ ಕಾರ್ಮಿಕರು ಒಳ್ಳೆಯ ಸೇವೆ ನೀಡುತ್ತಿದ್ದಾರೆ. ಆದರೆ ಕೇಂದ್ರ ಸರಕಾರದ ಹೊಸ ಉದಾರೀಕರಣ ನೀತಿಯನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುವ ಭಾಗವಾಗಿ ದೇಶದ ಉದ್ದಗಲಕ್ಕೂ ಖಾಯಂ ಸ್ವರೂಪದ ಕೆಲಸಗಳು ನಾಶವಾಗಿ ತಾತ್ಕಾಲಿಕ ಸ್ವರೂಪದ ಕೆಲಸಗಳು ಹೆಚ್ಚುತ್ತಿವೆ ಎಂದು ಹೇಳಿದರು.
ಕೆಲಸ ಕಳೆದುಕೊಂಡ ಕಾರ್ಮಿಕರನ್ನು ಪುನಃ ನೇಮಕ ಮಾಡಬೇಕು. ಅನಿವಾರ್ಯವಾಗಿ ಕೆಲಸದಿಂದ ಕೈಬಿಡಬೇಕಾದ ಪರಿಸ್ಥಿತಿ ಬಂದಾಗ ಅವರಿಗೆ ಪರಿಹಾರ ನೀಡಿ ಕೆಲಸದಿಂದ ತೆಗೆಯಬೇಕು ಎಂದು ಒತ್ತಾಯಿಸಿದ ವಸಂತ ಆಚಾರಿ, ಕಾರ್ಮಿಕರಿಗೆ ಉದ್ಯೋಗ ಚೀಟಿ, ವೇತನ ಚೀಟಿ, ವಾರದಲ್ಲಿ ಒಂದು ದಿನ ರಜೆ, ಹಬ್ಬದ ರಜೆ, ಹೆಚ್ಚುವರಿ ದುಡಿಮೆಗೆ ಹೆಚ್ಚುವರಿ ವೇತನ ನೀಡಲು ಸಾಧ್ಯವಾಗದ ಗುತ್ತಿಗೆದಾರರನ್ನು ನಿಯಂತ್ರಿಸಲು ವಿಫಲವಾದ ಪ್ರಧಾನ ಆಡಳಿತ ವರ್ಗದ ನೀತಿ ಖಂಡನೀಯವಾಗಿದೆ. ಹಾಗಾಗಿ ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಹೋರಾಟ ಚುರುಕುಗೊಳ್ಳುತ್ತಿವೆ. ಅದಕ್ಕೆ ಪೂರಕವಾಗಿ ಬಂಡವಾಳ ಶಾಹಿ ಪರ ಧೋರಣೆಯ ವಿರುದ್ಧ ಸಿಐಟಿಯು ಸೆ.5ರಂದು ಪಾರ್ಲಿಮೆಂಟ್ ಚಲೋ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್, ಮುಖಂಡರುಗಳಾದ ದಿನೇಶ್, ಸುನೀಲ್, ಹನೀಫ್, ನಿತ್ಯಾನಂದ, ಶಿವಪ್ರಕಾಶ್, ರಮೇಶ್, ಶೀನಪ್ಪಮತ್ತಿತರರು ಉಪಸ್ಥಿತರಿದ್ದರು.







