ಹರೇಕಳದಲ್ಲಿ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ: ಸಚಿವ ಪುಟ್ಟರಾಜು
ಮಂಗಳೂರು, ಜು.9: ಪಶ್ಚಿಮವಾಹಿನಿ ಯೋಜನೆಯಡಿ ಮಂಗಳೂರು ತಾಲೂಕಿನ ಹರೇಕಳದಲ್ಲಿ ನೇತ್ರಾವತಿ ಸೇತುವೆ ಸಹಿತ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟು ಕಾಮಗಾರಿಯನ್ನು 174 ಕೋ. ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ಅದಕ್ಕಾಗಿ ಟೆಂಡರ್ ಕರೆದು ಕಾಮಗಾರಿ ನಿರ್ವಹಿಸಲು ಗುತ್ತಿಗೆ ನೀಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದ್ದಾರೆ.
ಪಶ್ಚಿಮ ವಾಹಿನಿ ಯೋಜನೆ ಯಾವಾಗ ಪೂರ್ಣಗೊಳ್ಳಲಿದೆ ? ಯೋಜನೆಗೆ ಮೀಸಲಿಟ್ಟ ಅನುದಾನ ಎಷ್ಟು? ಎಂಬ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಪ್ರಶ್ನೆಗೆ ಸಚಿವರು ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಉತ್ತರಿಸಿದರು.
ಪಶ್ಚಿಮವಾಹಿನಿ ಯೋಜನೆಗೆ 2017-18ನೇ ಸಾಲಿನ ಆಯವ್ಯಯದಲ್ಲಿ 100 ಕೋ.ರೂ. ಅನುದಾನ ನಿಗದಿಪಡಿಸಲಾಗಿದೆ. ದ.ಕ. ಮತ್ತು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 53 ಕಿಂಡಿ ಅಣೆಕಟ್ಟು ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಅದರಲ್ಲಿ ದ.ಕ. ಜಿಲ್ಲೆಯ 11, ಉಡುಪಿ ಜಿಲ್ಲೆಯ 14, ಉತ್ತರ ಕನ್ನಡ ಜಿಲ್ಲೆಯ 29 ಕಾಮಗಾರಿಗಳು ಅನುಮೋದನೆಗೊಂಡಿದೆ. ಈ ಕಾಮಗಾರಿಯ ಗುತ್ತಿಗೆ ನೀಡಲು ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಸಚಿವ ಪಿ.ಎಸ್.ಪುಟ್ಟರಾಜು ಹೇಳಿದರು.
ಮಂಗಳೂರು ವಿಭಾಗದ ವತಿಯಿಂದ ಮಂಗಳೂರು ನಗರದ ಸ್ಟೇಟ್‌ಬ್ಯಾಂಕ್ ಪ್ರದೇಶದಿಂದ ಉಡುಪಿ ಮಾರ್ಗವಾಗಿ ಮಣಿಪಾಲಕ್ಕೆ ಹಾಗೂ ಅದೇ ಮಾರ್ಗವಾಗಿ ಹಿಂದಕ್ಕೆ ಪ್ರಸ್ತುತ 10 ಹವಾನಿಯಂತ್ರಿತ ವೋಲ್ವೋ ಬಸ್ಸುಗಳನ್ನು ಕಾರ್ಯಚರಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ತಮ್ಮಣ್ಣ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮಂಗಳೂರು, ಉಡುಪಿ ಮಣಿಪಾಲ, ಕುಂದಾಪುರಗಳಲ್ಲಿ ಕಾರ್ಯನಿರ್ವಸುತ್ತಿರುವ ಹವಾ ನಿಯಂತ್ರಿತ ಬಸ್‌ಗಳ ಆದಾಯ ಲಾಭಕರವಾಗಿದೆಯೇ? ಎಷ್ಟು ಬಸ್ ಪ್ರಾರಂಭಿಸಲಾಗಿದೆ? ಪ್ರಸ್ತುತ ಎಷ್ಟು ಬಸ್ಸು ಕಾರ್ಯನಿರ್ವಹಿಸುತ್ತಿದೆ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಮಂಗಳೂರು-ಉಡುಪಿ-ಕುಂದಾಪುರ-ಭಟ್ಕಳ ಮಾರ್ಗದಲ್ಲಿ 8 ಹವಾನಿಯಂತ್ರಿತ ವೋಲ್ವೋ ಬಸ್‌ಗಳಿಂದ 24 ಸಿಂಗಲ್ ಟ್ರಿಪ್‌ಗಳ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮಂಗಳೂರು-ಬೆಂಗಳೂರು- ಉಡುಪಿ-ಮಣಿಪಾಲ ಮಾರ್ಗದಲ್ಲಿ ಪ್ರಸ್ತುತ 4 ಮಲ್ಟಿ ಅಕ್ಸೆಲ್ ವೋಲ್ವೋ (ಹವಾನಿಯಂತ್ರಿತ) ಬಸ್‌ಗಳನ್ನು ಕಾರ್ಯಾಚರಿಸಲಾಗುತ್ತಿದೆ.ಅವುಗಳಿಂದ 4 ಸಿಂಗಲ್ ಟ್ರಿಪ್‌ಗಳ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಸಚಿವ ತಮ್ಮಣ್ಣ ಹೇಳಿದರು.
ಮಂಗಳೂರು ನಗರದಲ್ಲಿ ನರ್ಮ್ ಯೋಜನೆಯನ್ವಯ 35 ಬಸ್‌ಗಳನ್ನು ಕಾರ್ಯಾಚರಿಸಲು ಯೋಜಿಸಲಾಗಿತ್ತು. ಈ ಎಲ್ಲಾ 35 ವಾಹನಗಳಿಗೆ ಪರವಾನಗಿ ಮಂಜೂರಾತಿಯಾಗಿದೆ. ಮಂಗಳೂರಿನಲ್ಲಿ ನಿಗಮದ ಬಸ್ ನಿಲ್ದಾಣವನ್ನು 400ಎಕರೆ ಪ್ರದೇಶದಲ್ಲಿ ನಿರ್ಮಿಸಿ ವಾಹನಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 74ರ ಪ್ರಕಾರ 2003ನೇ ಸಾಲಿನಿಂದ ಇಂದಿನವರೆಗೆ ರಾಜ್ಯಾದ್ಯಂತ ಸಂಚರಿಸಲು 3,099 ವಾಹನಗಳಿಗೆ ಕಾಂಟ್ರಾಕ್ಟ್ ಕ್ಯಾರೇಜ್ ರಹದಾರಿಗಳನ್ನು ನೀಡಲಾಗಿದೆ ಎಂದು ಸಚಿವ ತಮ್ಮಣ್ಣ ಸ್ಪಷ್ಟಪಡಿಸಿದರು.
2017-18ನೇ ಸಾಲಿನಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ 963 ಗ್ರಾಮಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ರಾಜ್ಯದಲ್ಲಿ 2016-17 ಮತ್ತು 2017-18ರಲ್ಲಿ ಎಷ್ಟು ಗ್ರಾಮ ವಿಕಾಸ ಯೋಜನೆಯನ್ನು ಮಂಜೂರು ಮಾಡಲಾಗಿದೆ ? ಈ ಯೋಜನೆಯ ಮಂಜೂರಾತಿಗೆ ಯಾವ ಮಾನದಂಡ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಪ್ರಶ್ನೆಗೆ ಸಚಿವರು ಉತ್ತರಿಸಿದರು.







