‘ನರೇಗಾ’ದಡಿ ಮನೆಗೊಂದು ಹಣ್ಣಿನ ತೋಟ ನಿರ್ಮಿಸಲು ಸುಗ್ರಾಮ ಸಂಕಲ್ಪ
ಮಂಗಳೂರು, ಜು.9: ಗ್ರಾಪಂ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ (ಸುಗ್ರಾಮ)ಕಾರ್ಯನಿರ್ವಸುತ್ತಿರುವ 15 ಗ್ರಾಪಂ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತಿತರ ಹಿಂದುಳಿದ ವರ್ಗದ ಅರ್ಹ ಕುಟುಂಬಗಳ ಜಮೀನುಗಳಲ್ಲಿ ಮಹಾತ್ಮಾಗಾಂಧಿ ನರೇಗಾದಡಿ 10ರಿಂದ 15 ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟು ಪೌಷ್ಟಿಕ ತೋಟ ನಿರ್ಮಿಸುವ ಕಾಮಗಾರಿಗಳ ಕೆಲಸಗಳನ್ನು ಆದ್ಯತೆಯಲ್ಲಿ ಕೈಗೆತ್ತಿಕೊಂಡು ನೆಲ ಜಲ ಸಂರಕ್ಷಣೆಯೊಂದಿಗೆ ಅಪೌಷ್ಟಿಕತೆ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು ಸಂಕಲ್ಪಿಸಿದೆ.
ಜನ ಶಿಕ್ಷಣ ಟ್ರಸ್ಟ್, ದಿ ಹಂಗರ್ ಪ್ರೊಜೆಕ್ಟ್, ಸುಗ್ರಾಮ ಸಂಘ ಹಾಗೂ ತಾಪಂ ಸಹಭಾಗಿತ್ವದಲ್ಲಿ ಸಾಮರ್ಥ್ಯ ಸೌಧದಲ್ಲಿ ನಡೆದ ‘ಸುಗ್ರಾಮ’ ಸಂವಾದ ಸಂಕಲ್ಪಕಾರ್ಯಕ್ರಮದಲ್ಲಿ ನರೇಗಾ ಸೌಲಭ್ಯವನ್ನು ಕಟ್ಟಕಡೆಯ ಅರ್ಹ ಕುಟುಂಬಗಳಿಗೆ ತಲುಪಿಸಲು ತೀರ್ಮಾನಿಸಲಾಯಿತು.
ತಾಪಂ ಇಒ ಸದಾನಂದ ಸಂವಾದದಲ್ಲಿ ಭಾಗವಹಿಸಿ ನರೇಗಾದಡಿ ಕೈಗೆತ್ತಿಕೊಳ್ಳಬಹುದಾದ ಕಾಮಗಾರಿಗಳು, ವಸತಿ ಯೋಜನೆ, ವಾರ್ಡ್, ಗ್ರಾಮ ಸಭೆಗಳ ಬಲವರ್ಧನೆ ಕುರಿತು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯಿಂದ ಲಭ್ಯವಿರುವ ತೋಟಗಾರಿಕಾ ಅಭಿವೃದ್ಧಿ ಯೋಜನೆಗಳು, ತರಬೇತಿ ಕಾರ್ಯಕ್ರಮಗಳ ಬಗ್ಗೆ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಮಾಹಿತಿ ನೀಡಿ ನರೇಗಾ ಮತ್ತು ಇಲಾಖೆಯ ತೋಟಗಾರಿಕಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅರ್ಹ ಫಲಾನುಭಗಳನ್ನು ಗುರುತಿಸುವ ಕಾರ್ಯದಲ್ಲಿ ಚುನಾಯಿತ ಸದಸ್ಯರು ಇಲಾಖೆಗೆ ಸಹಕರಿಸಿದರೆ ಮನೆಗೊಂದು ಹಣ್ಣಿನ ತೋಟ ನಿರ್ಮಾಣ ಮಾತ್ರವಲ್ಲದೆ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಕಾರ್ಯ ಸುಲಭ ಸಾಧ್ಯ ಎಂದರು.
ತೋಟಗಾರಿಕೆ ಮತ್ತು ಜೇನು ಕೃಷಿ ಮೂಲಕ ಸ್ವಾಭಿಮಾನದ ಸ್ವಾವಲಂಬಿ ಜೀವನ ಸಾಗಿಸುವ ಸಾಧ್ಯತೆಗಳ ಬಗ್ಗೆ ನಿವೃತ ಕೈಗಾರಿಕಾ ವಿಸ್ತರಿಣಾಧಿಕಾರಿ ಬಾಲಕೃಷ್ಣ ಭಟ್ ಮಾಹಿತಿ ನೀಡಿದರು. ಸಂವಾದ ನಿರ್ವಸಿದ ಮಹಾತ್ಮ ಗಾಂಧಿ ನರೇಗಾ ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ ಗ್ರಾಮೀಣ ಪ್ರದೇಶ ಹಾಗೂ ಗ್ರಾಮೀಣರ ಪಾಲಿಗೆ ವರದಾನವಾಗಿರುವ ಮಹಾತ್ಮಾ ಗಾಂಧಿ ನರೇಗಾದಡಿ ಅರ್ಹ ಬಡ ಕುಟುಂಬಗಳ ಜಮೀನುಗಳಲ್ಲಿ ತೋಟಗಾರಿಕೆ, ಬಾವಿ ನಿರ್ಮಾಣ, ಹಟ್ಟಿ ರಚನೆ, ಜಲ ಮರುಪೂರಣದಂತಹ ಬಡವರ ಜೀವನೋಪಾಯ ಸಂಪನ್ಮೂಲ ವೃದ್ಧಿಸುವ ಕಾಮಗಾರಿಗಳನ್ನು ಆದ್ಯತೆಯಲ್ಲಿ ಕೈಗೊಳ್ಳಬೇಕು ಎಂದರು.
ಸುಗ್ರಾಮ ಸಂಘದ ಅಧ್ಯಕ್ಷೆ ಸವಿತಾ, ಮೆನ್ನಬೆಟ್ಟು ಗ್ರಾಪಂ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ವಾಲ್ಪಾಡಿ ಗ್ರಾಪಂ ಅಧ್ಯಕ್ಷೆ ವಸಂತಿ, ಪಾವೂರು ಗ್ರಾಪಂ ಉಪಾಧ್ಯಕ್ಷೆ ಲೀಲಾವತಿ, ಕೊಣಾಜೆ ಗ್ರಾಪಂ ಉಪಾಧ್ಯಕ್ಷೆ ಲಲಿತಾ ಎಸ್. ರಾವ್ ಸಹಿತ 10 ಗ್ರಾಪಂ ವಾಪ್ತಿಯ ಮಹಿಳಾ ಸದಸ್ಯರು ಭಾಗವಹಿಸಿದ್ದರು.
ಜನ ಶಿಕ್ಷಣ ಟ್ರಸ್ಟ್ ಸಂಯೋಜಕಿ ಚಂಚಲಾ, ಪದ್ಮಿನಿ, ಕಾವೇರಿ ಸಂವಾದವನ್ನು ಸಂಯೋಜಿಸಿದ್ದರು.







