ಭಾರತದ ಕ್ಯಾನ್ಸರ್ ಔಷಧಿಗಳ ಮೇಲಿನ ಆಮದು ಸುಂಕ ಕಡಿತಕ್ಕೆ ಚೀನಾ ಸಮ್ಮತಿ

ಬೀಜಿಂಗ್,ಜು.9: ಚೀನಾಕ್ಕೆ ಭಾರತದಿಂದ ರಫ್ತಾಗುವ ಔಷಧಿಗಳ,ವಿಶೇಷವಾಗಿ ಕ್ಯಾನ್ಸರ್ ಔಷಧಿಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲು ಉಭಯ ರಾಷ್ಟ್ರಗಳು ಒಡಂಬಡಿಕೆಯನ್ನು ಮಾಡಿಕೊಂಡಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯವು ಸೋಮವಾರ ತಿಳಿಸಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆಗೊಂಡ ರಕ್ತಕ್ಯಾನ್ಸರ್ ರೋಗಿಯ ಕುರಿತ ಚೀನಿ ಸಿನಿಮಾವೊಂದು ಅಗ್ಗದ ಭಾರತೀಯ ಔಷಧಿಗಳ ಆಮದಿಗೆ ಮಾರ್ಗವನ್ನು ಸುಗಮಗೊಳಿಸುವ ಅಗತ್ಯವನ್ನು ಪ್ರಮುಖವಾಗಿ ಬಿಂಬಿಸಿದೆ.
ಆದರೆ ತನ್ನ ಬೃಹತ್ ಮಾರುಕಟ್ಟೆಯಲ್ಲಿ ಕ್ಯಾನ್ಸರ್ ಔಷಧಿಗಳ ಮಾರಾಟಕ್ಕಾಗಿ ಭಾರತೀಯ ಕಂಪೆನಿಗಳಿಗೆ ಪರವಾನಿಗೆಗಳನ್ನು ನೀಡಲು ಚೀನಾ ಒಪ್ಪಿಕೊಂಡಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಚೀನಾ ಆ ನಿರ್ಧಾರವನ್ನು ತೆಗೆದುಕೊಂಡರೆ ಅದು ಪ್ರಮುಖ ಹೆಜ್ಜೆಯಾಗಲಿದೆ.
ಸರಕಾರಿ ಸ್ವಾಮ್ಯದ ಚೀನಾ ಸೆಂಟ್ರಲ್ ಟಿವಿಯ ವರದಿಯಂತೆ ಈ ದೇಶದಲ್ಲಿ ವಾರ್ಷಿಕ ಸುಮಾರು 4.3 ಮಿಲಿಯ ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದ ಔಷಧಿಗಳು,ವಿಶೇಷವಾಗಿ ಕ್ಯಾನ್ಸರ್ ಔಷಧಿಗಳು ಅಗ್ಗ ವಾಗಿರುವುದರಿಂದ ಅವುಗಳಿಗೆ ಚೀನಾದಲ್ಲಿ ಭಾರೀ ಬೇಡಿಕೆಯಿದೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಭಾರತದ ಕ್ಯಾನ್ಸರ್ ಔಷಧಿಗಳ ಮೇಲಿನ ಆಮದು ಸುಂಕ ಕಡಿತದ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಹುಆ ಚುನ್‌ಯಿಂಗ್ ಅವರು,ಕ್ಯಾನ್ಸರ್ ನಿರೋಧಕ ಔಷಧಿಗಳ ಹೆಚ್ಚಿನ ಆಮದು ಮತ್ತು ಸುಂಕ ಕಡಿತಗಳು ಭಾರತ ಮತ್ತು ಪ್ರದೇಶದಲ್ಲಿನ ಇತರ ರಾಷ್ಟ್ರಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಲಿವೆ ಎಂದು ನಾವು ನಂಬಿದ್ದೇವೆ ಎಂದು ತಿಳಿಸಿದರು.







