ಶಿರಾಡಿ ಘಾಟ್ ಉದ್ಘಾಟನೆಗೆ ಗಡ್ಕರಿ, ಆಸ್ಕರ್ ಕರೆಯಲು ತೀರ್ಮಾನ : ಸಚಿವ ಖಾದರ್

ಬೆಂಗಳೂರು, ಜು. 9: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆ ದುರಸ್ತಿಗೊಂಡು ಸಜ್ಜುಗೊಳ್ಳುತ್ತಿದ್ದು, ಉದ್ಘಾಟನೆಗೆ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡಿಸ್ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಗಡ್ಕರಿ ದಿನಾಂಕ ನಿಗದಿಗಾಗಿ ಸಚಿವರ ದೆಹಲಿಯ ಕಚೇರಿಗೆ ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ಫ್ಯಾಕ್ಸ್ ಸಂದೇಶ ರವಾನಿಸಲಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ 313ನೇ ಕೊಠಡಿಯಲ್ಲಿ ಸಭೆ ಸೇರಿದ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ, ಯು.ಟಿ.ಖಾದರ್ ಹಾಗೂ ಸಾರಿಗೆ, ಲೋಕೋಪಯೋಗಿ ಇಲಾಖಾಧಿಕಾರಿಗಳು ಉನ್ನತ ಮಟ್ಟದ ಸಮಾಲೋಚನೆ ನಡೆಸಿ ಶಿರಾಡಿ ಘಾಟ್ ರಸ್ತೆಯ ಅವಲೋಕನ ಮಾಡಿದರು.
ಅಲ್ಲಿನ ವಿವರಣೆಗಳನ್ನು ಅಧಿಕಾರಿಗಳು ಸಚಿವರ ಮುಂದಿಟ್ಟರು. ಪ್ರಸ್ತುತ ನಿತಿನ್ ಗಡ್ಕರಿ ಸಾರಿಗೆ ಸಚಿವರಾಗಿದ್ದಾರೆ. ಈ ಹಿಂದೆ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಶಿರಾಡಿ ಘಾಟ್ ರಸ್ತೆಗೆ 185 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಇತರ ರಾಜಕೀಯ, ಆಡಳಿತ ವರ್ಗದ ಗಣ್ಯರ ಜೊತೆ ಈ ಇಬ್ಬರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ.







