ನ್ಯಾಯಾಲಯ ಕಲಾಪದ ನೇರ ಪ್ರಸಾರಕ್ಕೆ ಕೇಂದ್ರ ಸರಕಾರ ಒಪ್ಪಿಗೆ

ಹೊಸದಿಲ್ಲಿ, ಜು. 9: ಅತ್ಯಾಚಾರ ಪ್ರಕರಣಗಳು, ವೈವಾಹಿಕ ಪ್ರಕರಣಗಳು ಹಾಗೂ ಇನ್ ಕ್ಯಾಮೆರಾ ವಿಚಾರಣೆಗಳನ್ನು ಹೊರತುಪಡಿಸಿ ಇತರ ಎಲ್ಲ ಪ್ರಕರಣಗಳಲ್ಲಿ ನ್ಯಾಯಾಲಯ ಕಲಾಪಗಳ ನೇರ ಪ್ರಸಾರವನ್ನು ದೇಶದ ಎಲ್ಲ ನ್ಯಾಯಾಲಯಗಳು ಮಾಡಬಹುದು ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನ್ಯಾಯಾಲಯದ ಕಲಾಪಗಳನ್ನು ನೇರ ಪ್ರಸಾರ ಮಾಡಲು ಸಂಪೂರ್ಣ ಮಾರ್ಗಸೂಚಿಗಳನ್ನು ರೂಪಿಸಲು ಅಟಾರ್ನಿ ಜನರಲ್‌ಗೆ ಸಲಹೆಗಳನ್ನು ನೀಡುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ನ್ಯಾಯಪೀಠ ನಿರ್ದೇಶಿಸಿತ್ತು. ನ್ಯಾಯಾಲಯದಲ್ಲಿ ನಡೆಯುವ ಕಲಾಪಗಳ ಲಿಪ್ಯಂತರ, ವೀಡಿಯೊ ದಾಖಲೆ, ನೇರ ಪ್ರಸಾರಕ್ಕೆ ಕೋರಿ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೇ 3ರಂದು ಕೇಂದ್ರ ಸರಕಾರದ ಪ್ರತಿಕ್ರಿಯೆ ಕೋರಿತ್ತು. ನ್ಯಾಯಾಲಯದ ಕಲಾಪಗಳ ನೇರ ಪ್ರಸಾರ ವಿವಿಧ ದೇಶಗಳಲ್ಲಿ ಒಪ್ಪಿತ ವಿಷಯ ಎಂದು ಈ ಹಿಂದೆ ಅಟಾರ್ನಿ ಜನರಲ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
ನ್ಯಾಯಾಲಯದ ಕಲಾಪಗಳಲ್ಲಿ ಪಾರದರ್ಶಕತೆ ತರುವ ಕ್ರಮವಾಗಿ ಪ್ರತಿ ರಾಜ್ಯಗಳಲ್ಲಿ ವಿಚಾರಣಾ ಹಾಗೂ ಟ್ರಿಬ್ಯೂನಲ್ ನ್ಯಾಯಾಲಯಗಳಲ್ಲಿ ಆಡಿಯೊದೊಂದಿಗೆ ಸಿಸಿಟಿವಿ ಕೆಮರಾಗಳನ್ನು ಅಳವಡಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಸುಪ್ರೀಂ ಕೋರ್ಟ್‌ನ ಆವರಣದ ಒಳಗಡೆ ನೇರ ಪ್ರಸಾರದ ಕೇಂದ್ರಗಳನ್ನು ತೆರೆಯುವಂತೆ ಹಾಗೂ ಕಾನೂನು ಶಿಕ್ಷಣ ಪಡೆಯುತ್ತಿರುವ ಇಂಟರ್ನ್‌ಶಿಫ್ ವಿದ್ಯಾರ್ಧಿಗಳಿಗೆ ಕಲಾಪಗಳನ್ನು ವೀಕ್ಷಿಸಲು ಅನುಕೂಲ ಮಾಡಿಕೊಡಲು ನಿರ್ದೇಶನ ನೀಡುವಂತೆ ಕೋರಿ ಕಾನೂನು ವಿದ್ಯಾರ್ಥಿಯೊಬ್ಬ ಮನವಿ ಸಲ್ಲಿಸಿದ್ದ. ಇಂಟರ್ನ್‌ಶಿಪ್ ವಿದ್ಯಾರ್ಥಿಗಳು ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಲು ಅಗತ್ಯವಾದ ಮಾರ್ಗದರ್ಶನ ಸೂಚಿಗಳನ್ನು ಹೊರಡಿಸುವಂತೆ ಕೋರಿ ಜೋಧಪುರ ರಾಷ್ಟ್ರೀಯ ಕಾನೂನು ವಿ.ವಿ. ವಿದ್ಯಾರ್ಥಿ ಸ್ವಪ್ನಿಲ್ ತ್ರಿಪಾಠಿ ಮನವಿ ಸಲ್ಲಿಸಿದ್ದರು.







