ನಾನು ಸಾಂದರ್ಭಿಕ ಶಿಶುವಾದರೂ, ಅಪ್ಪ-ಅಮ್ಮ ಇದ್ದಾರೆ: ಕುಮಾರಸ್ವಾಮಿ

ಬೆಂಗಳೂರು, ಜು. 9: ಮಹಾಭಾರತದ ಕರ್ಣನಂತೆ ನಾನು ಸಾಂದರ್ಭಿಕ ಶಿಶುವಾದರೂ, ಕರ್ಣನಿಗೂ ಅಪ್ಪ-ಅಮ್ಮ ಇದ್ದರು. ಅದೇ ರೀತಿ ನನಗೂ ಜೆಡಿಎಸ್-ಕಾಂಗ್ರೆಸ್ ಶಾಸಕರು ಅಪ್ಪ-ಅಮ್ಮ. ಸುಭದ್ರ ಸರಕಾರ ನೀಡುವ ಮೂಲಕ ರಾಜ್ಯದ ಆರೂವರೆ ಕೋಟಿ ಜನರ ಆಶೋತ್ತರಗಳನ್ನು ಈಡೇರಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಸರಕಾರವನ್ನು ಅಪವಿತ್ರ ಮೈತ್ರಿ, ಜನರ ನಂಬಿಕೆಗೆ ಮಾಡಿದ ದ್ರೋಹ ಎಂದೆಲ್ಲ ಬಣ್ಣಿಸಲಾಗಿದೆ. ಆದರೆ ಇದು ಸಂವಿಧಾನಬದ್ಧ ಸರಕಾರ. ಸಂವಿಧಾನ ಬದ್ಧವಲ್ಲದಿದ್ದರೆ ರಾಜ್ಯಪಾಲರು ಸರಕಾರ ರಚಿಸಲು ನಮಗೆ ಅವಕಾಶ ನೀಡುತ್ತಿರಲಿಲ್ಲ ಎಂದು ಸಮರ್ಥಿಸಿದರು.
ಬಿಜೆಪಿ ರಾಜ್ಯದ ಅತಿದೊಡ್ಡ ಪಕ್ಷ. 104 ಮಂದಿ ಶಾಸಕರನ್ನು ಹೊಂದಿರುವ ಪಕ್ಷ. ಕೇವಲ 37 ಶಾಸಕರ ಬೆಂಬಲವಿಟ್ಟುಕೊಂಡ ಕುಮಾರಸ್ವಾಮಿ ಸಿಎಂ ಆಗಿದ್ದಾರೆ ಎಂದು ಬಿಜೆಪಿ ಮುಖಂಡುರು ಟೀಕಿಸಿದ್ದಾರೆ. ಆದರೆ, ನಾನು 37 ಶಾಸಕರ ಬೆಂಬಲದಿಂದ ಸಿಎಂ ಆಗಿಲ್ಲ. 119 ಮಂದಿ ಶಾಸಕರಿಂದ ಸಿಎಂ ಆಗಿದ್ದೇನೆ ಎಂದರು.
2006ರಲ್ಲಿ ವಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪನವರೇ ನನ್ನ ಜತೆ ಕೈ ಜೋಡಿಸಿ ಜೆಡಿಎಸ್-ಬಿಜೆಪಿ ಸರಕಾರ ರಚನೆಯಾಗುವಂತೆ ಮಾಡಿದರಲ್ಲ, ಆಗ ನನ್ನ ಜತೆಗಿದ್ದವರು 38 ಮಂದಿ ಶಾಸಕರು ಮಾತ್ರ. ಆಗ ಧರ್ಮಸಿಂಗ್ ಅವರನ್ನು ಪದಚ್ಯುತಗೊಳಿಸಿ ನನ್ನ ಜತೆ ಸರಕಾರ ನಡೆಸಿದ್ದು ಅಕ್ಷಮ್ಯವಲ್ಲವೇ? ಆಗ ಮಾಡಿದ್ದು ನ್ಯಾಯ. ಈಗ ಮಾಡಿದ್ದು ಅನ್ಯಾಯ ಎನ್ನುತ್ತೀರಲ್ಲ ಎಂದು ವಾಗ್ಬಾಣ ಬಿಟ್ಟರು.
ಮೈತ್ರಿಕೂಟ ಸರಕಾರ ಕೇವಲ ಒಂದೂವರೆ ತಿಂಗಳು ಕಳೆದಿದೆ ಅಷ್ಟೇ. ಅಷ್ಟರಲ್ಲೇ ಈ ಸರಕಾರ ಬಹುಕಾಲ ಉಳಿಯುವುದಿಲ್ಲ. ಬೇಗನೆ ಬೀಳುತ್ತದೆ ಎಂದು ವ್ಯಾಖ್ಯಾನ ಮಾಡುತ್ತಿದ್ದೀರಿ. ಆದರೆ, ಯಾವ ಕಾರಣಕ್ಕೂ ಈ ಸರಕಾರ ಬೀಳುವುದಿಲ್ಲ. ಐದು ವರ್ಷ ಕಾಲ ಸುಭದ್ರವಾಗಿರುತ್ತದೆ ಎಂದು ಘೋಷಿಸಿದರು.
ಸರಕಾರ ಇನ್ನೂ ಟೇಕ್ ಆಫ್ ಆಗಿಲ್ಲ ಎಂದು ಪದೇ ಪದೇ ಹೇಳುತ್ತೀರಲ್ಲ? 2008ರಲ್ಲಿ ಸ್ವಂತ ಶಕ್ತಿಯ ಮೇಲೆ ಸರಕಾರ ರಚಿಸಿಕೊಂಡರೂ ಆಗ ಸುಭದ್ರ ಸರಕಾರ ನೀಡಿದ್ದೀರಾ? ಮೂರು ಮಂದಿ ಮುಖ್ಯಮಂತ್ರಿ ಮಾಡಿದ್ದು ಸುಭದ್ರ ಸರಕಾರವೇ ಎಂದು ಪ್ರಶ್ನಿಸಿದರು.
ಬಿಎಸ್‌ವೈ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಅವರು ಸಹಕಾರಿ ಬ್ಯಾಂಕೊಂದರ ಕಾರ್ಯಕ್ರಮಕ್ಕೆ ಹೋಗಿದ್ದರು. ನನ್ನ ಸರಕಾರ ಅಲುಗಾಡುತ್ತಿದೆ ಎಂದು ಹೇಳಿದ್ದರು. ಅವರ ಪಕ್ಷದಲ್ಲಿ 40 ಶಾಸಕರು ಬಂಡಾಯವೆದ್ದರು. ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಲು ಹೊರಟರು ಎಂದು ವಿವರಿಸಿದರು.
ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ಏನೇನು ಮಾತನಾಡಿದ್ದಿರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯಡಿಯೂರಪ್ಪ ಅವರಿಂದಲೇ ಭ್ರಷ್ಟಾಚಾರ ಆರಂಭವಾಯಿತು ಎಂದು ಆಗಿನ ಸಿಎಂ ಸದಾನಂದಗೌಡ ಹೇಳಿದ್ದರು. ಸಿಎಂ ಶೆಟ್ಟರ್ ಮತ್ತವರ ಕುಟುಂಬ ಲೂಟಿ ಮಾಡಿದೆ ಎಂದು ಇದೇ ಬಿಎಸ್‌ವೈ ಹೇಳಿದ್ದರು ಎಂದು ಪತ್ರಿಕಾ ಹೇಳಿಕೆಗಳನ್ನು ಉಲ್ಲೇಖಿಸಿದರು.
ಚುನಾವಣೆ ಸಂದರ್ಭದಲ್ಲಿ ಪರಸ್ಪರರನ್ನು ಟೀಕಿಸುತ್ತೇವೆ. ನೀವೇ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಟೀಕೆ ಮಾಡಿದ್ದಿರಿ ? ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಸಿದ್ದರಾಮಯ್ಯರನ್ನು ಜೈಲಿಗೆ ಹಾಕುತ್ತೇನೆ ಎಂದಿದ್ದಿರಿ. ಈಗ ಪ್ರೀತಿ ತೋರಿಸುತ್ತಿದ್ದೀರಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುತ್ತೇನೆಂದು ಹೇಳಿದ್ದು ಸತ್ಯ. ಆದರೆ, ಜನ ನಮ್ಮ ಪಕ್ಷದ ಪ್ರಣಾಳಿಕೆಯನ್ನು ತಿರಸ್ಕರಿಸಿದ್ದಾರೆ. ಪುರಸ್ಕರಿಸಿದ್ದರೆ 113 ಸೀಟುಗಳು ಬರುತ್ತಿದ್ದವು. ಆದರೆ, ಈಗ ರೈತರ 34 ಸಾವಿರ ಕೋಟಿ ರೂ.ಸಾಲಮನ್ನಾ ಮಾಡಲಾಗಿದೆ. ಅದಕ್ಕಾಗಿ ಒಂದು ಒಳ್ಳೆಯ ಮಾತು ಆಡಲು ಇವರಿಗೆ ಮನಸ್ಸು ಬರಲಿಲ್ಲ ಎಂದು ಟೀಕಿಸಿದರು.
‘ಹೆಂಡತಿಯನ್ನು ಅಡವಿಟ್ಟು ಜೂಜು ಆಡಿದ ಧರ್ಮರಾಯ ಏನು ಖಳನಾಯಕ ಅಲ್ಲವೇ? ಮಹಾಭಾರತದ ಬಗ್ಗೆ ಸದನದ ಹೊರಗೆ ಚರ್ಚೆ ಮಾಡೋಣ. ಅವುಗಳನ್ನು ಸದನಕ್ಕೆ ತರುವುದು ಬೇಡ. ದ್ರೌಪತಿ ವಸ್ತ್ರಾಪಹರಣ ವಿಚಾರವನ್ನು ಮುಂದಿಟ್ಟು ದುರ್ಯೋದನನ್ನು ಖಳನಂತೆ ನೋಡುವುದು ಸರಿಯಲ್ಲ’
-ರಮೇಶ್ ಕುಮಾರ್, ಸ್ಪೀಕರ್







