ನಾನು ಭಯಗ್ರಸ್ಥ ಮುಖ್ಯಮಂತ್ರಿಯಲ್ಲ: ಎಚ್.ಡಿ ಕುಮಾರಸ್ವಾಮಿ
"ರೈತ ಬೆಳೆದ ಅನ್ನದ ಅಗುಳಿನ ಮೇಲೆ ಯಾವ ಜಾತಿ ಹೆಸರಿದೆ"

ಬೆಂಗಳೂರು, ಜು. 9: ರೈತ ಬೆಳೆದ ಅನ್ನದ ಅಗುಳಿನ ಮೇಲೆ ಒಕ್ಕಲಿಗ ಅಥವಾ ಲಿಂಗಾಯತ ಎಂದು ಬರೆದಿದ್ದಾರೆಯೇ? ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ರೈತರ ಸಾಲಮನ್ನಾ ಒಕ್ಕಲಿಗರಿಗಷ್ಟೇ ಅನುಕೂಲ ಆಗಿದೆ ಎಂಬ ಟೀಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸಾಲಮನ್ನಾ ಟೀಕೆಗೂ ಜಾತಿಯ ಲೇಪನ ಮಾಡಬೇಕೇ? ಬಜೆಟ್‌ನಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಗೊಂದಲ ಸೃಷ್ಟಿಸಲು ಯತ್ನಿಸಿದರು. ಆದರೆ, ನಾವು ಸಾಲಮನ್ನಾ ಮಾಡುವ ವೇಳೆ ಜಾತಿ, ಪ್ರದೇಶ ಯಾವುದನ್ನೂ ನೋಡದೆ ಸಾಲಮನ್ನಾ ಘೋಷಣೆ ಮಾಡಿದ್ದೇವೆ ಎಂದರು.
ಹಾಸನ ವರ್ತುಲ ರಸ್ತೆಗೆ 30ಕೋಟಿ ರೂ.ಮೀಸಲಿಟ್ಟಿದ್ದಕ್ಕೆ ದೊಡ್ಡ ಚರ್ಚೆ ಆಗುತ್ತಿದೆ. ಹಾಸನಕ್ಕೆ ಏನೇನು ಕೊಟ್ಟಿದ್ದಾರೆಂದು ಗೊತ್ತಿದೆ. ಇನ್ನೂ ನೈತಿಕತೆ ಉಳಿಸಿಕೊಂಡಿದ್ದೇವೆ. ರಾಜಕೀಯ ಮಾಡಿ. ಆದರೆ, ಸುಳ್ಳು ಆರೋಪಗಳನ್ನು ಮಾಡಬೇಡಿ ಎಂದ ಅವರು, ತಾನು ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆ ಎಂದರು.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಾವು ಸುಭದ್ರ ಸರಕಾರ ನೀಡುವ ಕುರಿತು ಯಾವುದೇ ಸಂಶಯ ಬೇಡ. ನಾನು ಭಯಗ್ರಸ್ಥ ಮುಖ್ಯಮಂತ್ರಿಯಲ್ಲ ಎಂದ ಅವರು, ರಾಜ್ಯಪಾಲರ ವಂದನಾ ನಿರ್ಣಯಕ್ಕೆ ಈ ಸದನ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.







