ಉಡುಪಿಯಲ್ಲಿ ಎನ್‌ಡಿಆರ್‌ಎಫ್ ತಂಡ: ರಕ್ಷಣಾ ಕಾರ್ಯಕ್ಕೆ ಸಜ್ಜು

ಉಡುಪಿ, ಜು.9: ನೆರೆ ಹಾವಳಿಯಿಂದ ತತ್ತರಿಸಿರುವ ಉಡುಪಿ ಜಿಲ್ಲೆಗೆ ಆಗಮಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ಸರ್ವಸುಸಜ್ಜಿತ 30 ಮಂದಿಯ ತಂಡವು ಕಳೆದ ಎರಡು ದಿನಗಳಿಂದ ಉಡುಪಿ ನಗರದಲ್ಲಿ ಬೀಡುಬಿಟ್ಟಿದ್ದು, ನೆರೆ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಕ್ಕೆ ಸಜ್ಜಾಗಿ ನಿಂತಿದೆ.
ಬೆಂಗಳೂರಿನಿಂದ ಆಗಮಿಸಿರುವ ಸಹಾಯಕ ಕಮಾಂಡರ್ ಸುಬೀಶ್ ಕೆ.ಎಸ್. ನೇತೃತ್ವದ ಒಟ್ಟು ಮೂವತ್ತು ಮಂದಿಯ ತಂಡವು ಬನ್ನಂಜೆ ನಾರಾ ಯಣಗುರು ಮಂದಿರ ಹಾಗೂ ಪ್ರವಾಸಿ ಮಂದಿರದಲ್ಲಿ ನೆಲೆ ನಿಂತಿದ್ದು, ನೆರೆ ಸೇರಿದಂತೆ ವಿವಿಧ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುವ ಪ್ರದೇಶಗಳಿಗೆ ತೆರಳಿ ತುರ್ತು ಕಾರ್ಯಾಚರಣೆ ನಡೆಸಲು ತಂಡ ಸನ್ನದ್ಧವಾಗಿದೆ.
ಈ ತಂಡದಲ್ಲಿ ತಲಾ 10 ಮಂದಿಯನ್ನು ಹೊತ್ತೊಯ್ಯುವ ಮೂರು ರಬ್ಬರ್ ಬೋಟುಗಳಿದ್ದು, ಮೂರು ಔಟ್ ಬೋಟು ಮೆಶಿನ್‌ಗಳಿವೆ. ಇಬ್ಬರು ಪರಿಣಿತ ಮುಳುಗು ತಜ್ಞರ ಸಹಿತ ಅದಕ್ಕೆ ಬೇಕಾದ ಪರಿಕರಗಳಿವೆ. ತರಬೇತಿ ಪಡೆದ ಜೀವರಕ್ಷಕರು ಈ ತಂಡದಲ್ಲಿದ್ದು, ಲೈಫ್‌ಜಾಕೆಟ್‌ಗಳು, ಮೀನುಗಾರಿಕೆ ಬಲೆ, ಹುಕ್ಸ್, ಟ್ಯೂಬ್ ಸೇರಿದಂತೆ ನೆರೆ, ಭೂಕಂಪ ಸಂದರ್ಭದಲ್ಲಿ ಜನ ಹಾಗೂ ಜಾನುವಾರುಗಳನ್ನು ರಕ್ಷಿಸಲು ಬೇಕಾದ ಎಲ್ಲ ಅಗತ್ಯ ಸಲಕರಣೆಗಳಿವೆ.
ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಉಂಟಾಗುವ ಸಾವು ನೋವುಗಳನ್ನು ತಡೆಯಲು ಪ್ರಥಮ ಚಿಕಿತ್ಸೆಗೆ ಬೇಕಾದ ಔಷಧಿಗಳ ಸಂಗ್ರಹ ಈ ತಂಡದಲ್ಲಿದ್ದು, ಔಷಧಿ ನೀಡುವ ಇಬ್ಬರು ಫಾರ್ಮಸಿಸ್ಟ್‌ಗಳಿದ್ದಾರೆ. ನೆರೆ ಪೀಡಿತ ಪ್ರದೇಶಗಳಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡರೆ ಸಂಬಂಧಪಟ್ಟವರನ್ನು ಸಂಪರ್ಕಿ ಸಲು ಅನುಕೂಲವಾಗುವ ವಿಸ್ಯಾಟ್ ಸಂಹನ ವ್ಯವಸ್ಥೆ ಕೂಡ ಇದರಲ್ಲಿದೆ.
ಅದೇ ರೀತಿ ಇತರ ಸಂವಹನ ಸಾಧನಗಳಾದ ಡಿಪ್ಲೊಯ್ ಅಂಟೇನಾ, ಸಟ್‌ಲೈಟ್ ಫೋನ್, ಹೈ ಫ್ರಿಕ್ವೆನ್ಸಿ ರೇಡಿಯೋ ಸೆಟ್, ವೆರಿ ಹೈ ಫ್ರಿಕ್ವೆನ್ಸಿ ರೇಡಿಯೋ ಸೆಟ್‌ಗಳು ಈ ತಂಡದಲ್ಲಿವೆ. ಇವುಗಳನ್ನು ತುರ್ತು ಸಂದರ್ಭದಲ್ಲಿ ಸಂಪರ್ಕ ಸಾಧಿಸಲು ಬಳಸಲಾಗುತ್ತದೆ. ಜು.7ರಂದು ರಾತ್ರಿ ವೇಳೆ ಉಡುಪಿಗೆ ಆಗಮಿಸಿ ರುವ ಈ ತಂಡವು ಜು.11ರವರೆಗೆ ಉಡುಪಿಯಲ್ಲೇ ಉಳಿದುಕೊಳ್ಳಲಿದೆ. ಎನ್‌ಡಿಆರ್‌ಎಫ್‌ನ ಸಲಕರಣೆಗಳನ್ನು ಹೊತ್ತ ಎರಡು ಲಾರಿ ಹಾಗೂ ಸಿಬ್ಬಂದಿ ಗಳನ್ನು ಕರೆತಂದ ಬಸ್ ಇದೀಗ ಬನ್ನಂಜೆ ಹಾಗೂ ಪ್ರವಾಸಿ ಮಂದಿರದಲ್ಲಿವೆ.
ಈಗಾಗಲೇ ತಂಡದ ಸಹಾಯಕ ಕಮಾಂಡರ್ ಸುಬೀಶ್ ಕೆ.ಎಸ್. ಹಾಗೂ ಇತರ ಅಧಿಕಾರಿಗಳು ಉಡುಪಿ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಅವ ರೊಂದಿಗೆ ನೆರೆ ಪೀಡಿತ ಪ್ರದೇಶಗಳಾದ ಕಾಪು ಸುತ್ತಮುತ್ತಲಿನ ಗ್ರಾಮಗಳು ಹಾಗೂ ಸಮುದ್ರ ತೀರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಗತ್ಯ ಮಾಹಿತಿ ಯನ್ನು ಪಡೆದುಕೊಂಡಿದ್ದಾರೆ. ಈ ತಂಡ ಮಾತ್ರವಲ್ಲದೆ ನೌಕಾಪಡೆಯ 10 ಮಂದಿಯ ತಂಡ ಕೂಡ ಕಳೆದ ಎರಡು ದಿನಗಳಿಂದ ಉಡುಪಿಯಲ್ಲಿ ಬೀಡು ಬಿಟ್ಟಿದೆ.
ಎನ್‌ಡಿಆರ್‌ಎಫ್ ತಂಡ ನೆರೆ ಹಾವಳಿಯನ್ನು ಎದುರಿಸಲು ಸರ್ವ ಸನ್ನದ್ಧ ವಾಗಿದ್ದು, ಅಗತ್ಯ ಇರುವಲ್ಲಿಗೆ ತಂಡವನ್ನು ಕಳುಹಿಸಿ ಜನರಿಗೆ ನೆರವಾಗಲಿದೆ. ಜನರ ರಕ್ಷಣೆಗೆ ಬೇಕಾದ ಎಲ್ಲ ವ್ಯವಸ್ಥೆ ನಮ್ಮಲ್ಲಿ ಇದೆ. ಜಿಲ್ಲಾಧಿಕಾರಿಗಳು ಜು.11ರವರೆಗೆ ತಂಡದ ಅಗತ್ಯ ಇರುವುದಾಗಿ ಹೇಳಿದ್ದು, ಅಲ್ಲಿಯವರೆಗೆ ತಂಡ ಉಡುಪಿಯಲ್ಲಿ ಉಳಿದುಕೊಳ್ಳಲಿದೆ.
- ಸುಬೀಶ್ ಕೆ.ಎಸ್., ಸಹಾಯಕ ಕಮಾಂಡರ್, ಎನ್‌ಡಿಆರ್‌ಎಫ್.







