ಬಿಎಸ್‌ವೈ-ಎಚ್‌ಡಿ ಕುಮಾರಸ್ವಾಮಿ ಮಧ್ಯೆ ವಾಕ್ಸಮರ
‘ಧರ್ಮಸಿಂಗ್ ಬೆನ್ನಿಗೆ ಚೂರಿ ಹಾಕಿದ ಇವರು, ಅವರ ಸಾವಿಗೆ ಕಾರಣಕರ್ತರು’

ಬೆಂಗಳೂರು, ಜು. 9: ‘ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡುವಂತಹದ್ದು, ಕುಮಾರಸ್ವಾಮಿಗೆ ರಕ್ತಗತವಾಗಿದೆ. ಧರ್ಮಸಿಂಗ್ ಅವರಿಗೆ ಬೆನ್ನಿಗೆ ಚೂರಿದ ಇವರು ಅವರ ಸಾವಿಗೆ ಕಾರಣಕರ್ತರಾಗಿದ್ದಾರೆ’ ಎಂಬ ವಿಪಕ್ಷ ನಾಯಕ ಯಡಿಯೂರಪ್ಪರ ಪ್ರಸ್ತಾಪ ವಿಧಾನಸಭೆಯಲ್ಲಿ ಕೆಲಕಾಲ ಪರಸ್ಪರ ವಾಕ್ಸಮರ, ತೀವ್ರ ಕೋಲಾಹಲಕ್ಕೆ ಕಾರಣವಾಯಿತು.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಸಿಎಂ ಕುಮಾರಸ್ವಾಮಿ ಉತ್ತರ ನೀಡಿದ ಬಳಿಕ ಸ್ಪಷ್ಟಣೆ ಕೇಳುವ ವೇಳೆ ಯಡಿಯೂರಪ್ಪ, ನಂಬಿಕೆ ದ್ರೋಹ ಕುಮಾರಸ್ವಾಮಿಗೆ ರಕ್ತಗತವಾಗಿದೆ ಎಂದು ಆರೋಪಿಸಿದರು. ಇದರಿಂದ ಕೆರಳಿದ ಕುಮಾರಸ್ವಾಮಿ ಪದೇ-ಪದೇ ಈ ಮಾತನ್ನು ಬಿಎಸ್‌ವೈ ಬಳಸುತ್ತಿರುವುದು ಸರಿಯಲ್ಲ. ನನ್ನ ಮುಖ್ಯಮಂತ್ರಿ ಮಾಡಿ ಎಂದು ನಾನು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ನನಗೊಂದು ಸಚಿವ ಸ್ಥಾನ ಕೊಡಿ ಬಿಜೆಪಿ ಬಿಟ್ಟು ಬರುತ್ತೇನೆ ಎಂದು ಬಿಎಸ್‌ವೈ ನನ್ನ ಮನೆಗೆ ಬಾಗಿಲಿಗೆ ಬಂದಿದ್ದರು ಎಂದು ವಾಗ್ಬಾಣ ಬಿಟ್ಟಿದ್ದರು.
‘ನಾನು ಅಧಿಕಾರಕ್ಕಾಗಿ ಯಾರಪ್ಪನ ಮನೆ ಬಾಗಿಲಿಗೂ ಹೋದವನಲ್ಲ. ಮಂತ್ರಿ ಮಾಡಿ ಎಂದು ನಿಮ್ಮ ಮನೆ ಬಾಗಿಲಿಗೂ ಬಂದಿರಲಿಲ್ಲ. ನೀವು ಹೇಳುತ್ತಿರುವುದು ಅಪ್ಪಟ ಸುಳ್ಳು’ ಎಂದ ಯಡಿಯೂರಪ್ಪ, ನನ್ನ ಮಾತಿನಲ್ಲಿ ಯಾವುದೇ ಅಸಂಸದೀಯ ಪದಗಳನ್ನು ಬಳಸಿಲ್ಲ. ಕುಮಾರಸ್ವಾಮಿ, ಧರ್ಮಸಿಂಗ್ ಬೆನ್ನಿಗೆ ಚೂರಿ ಹಾಕಿರುವುದು ನಿಜ. ಅಧಿಕಾರಕ್ಕಾಗಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಜೆಡಿಎಸ್-ಬಿಜೆಪಿ ಸರಕಾರದ ಅವಧಿಯಲ್ಲಿ 20 ತಿಂಗಳು ಡಿಸಿಎಂ ಆಗಿ ನಾನು ಎಲ್ಲವನ್ನು ಸಹಿಸಿಕೊಂಡಿದ್ದೆ. ಆದರೆ, ನನಗೆ ಅಧಿಕಾರ ಬಿಟ್ಟುಕೊಡುವ ವೇಳೆ ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಖಾಸಗಿ ಹೊಟೇಲ್ ಗೆ ಬಂದು ಷರತ್ತು ಹಾಕಿದರು ಎಂದರು.
ಇದರಿಂದ ಕೆರಳಿದ ಕುಮಾರಸ್ವಾಮಿ, ‘ನನ್ನ ರಕ್ತದ ಗುಣದ ಬಗ್ಗೆ ಮಾತನಾಡುತ್ತೀರ. ನಾನು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ನನಗೆ ದುರದ್ದೇಶವಿದ್ದರೆ ನಿಮಗೆ ಸಚಿವ ಸ್ಥಾನ ನೀಡಿ ಬಿಜೆಪಿಯಿಂದ ಹೊರ ತಂದುಬಿಡಬಹುದಿತ್ತು. ಎಲುಬಿಲ್ಲದ ನಾಲಿಗೆ ಎಂದು ಬಾಯಿಗೆ ಬಂದಂತೆ ಮಾತನಾಡಬೇಡಿ. ನನಗೂ ನಿಮ್ಮಂತೆ ಏರಿದ ಧ್ವನಿಯಲ್ಲಿ ಮಾತನಾಡುವುದು ಗೊತ್ತು. ಎಲ್ಲವೂ ಹೇಳಲು ನನಗೂ ಗೊತ್ತಿದೆ. ನಿಮ್ಮ ಮಿತಿಯಲ್ಲಿ ನೀವು ಎಷ್ಟು ಬೇಕೋ ಅಷ್ಟು ಮಾತನಾಡಿ’ ಎಂದು ಆಕ್ರೋಶ ಹೊರಹಾಕಿದರು.
ಇದರಿಂದ ಸದನದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಯಿತು. ಉಭಯ ನಾಯಕರ ನಡುವೆ ಏರುಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಪರಸ್ಪರ ವಾಗ್ವಾದ ನಡೆಯಿತು. ಮಾತಿನ ಚಕಮಕಿ ಹಿನ್ನೆಲೆಯಲ್ಲಿ ಸದನದಲ್ಲಿ ಗೊಂದಲ ಸೃಷ್ಟಿಯಾಯಿತು.
ಈ ವೇಳೇ ಪದೇ ಪದೇ ಎದ್ದು ನಿಲ್ಲುತ್ತಿದ್ದ ಬಿಜೆಪಿಯ ರೇಣುಕಾಚಾರ್ಯ ಅವರಿಗೆ, ಸಚಿವ ಪ್ರಿಯಾಂಕ ಖರ್ಗೆ, ‘ಸುಮ್ಮನೆ ಕೂತ್ಕೊಳ್ರಿ’ ಎಂದು ಹೇಳಿದಾಗ ಅವರಿಬ್ಬರ ನಡುವೆ ಒಂದು ಸುತ್ತಿನ ಮಾತಿನ ಚಕಮಕಿ ನಡೆಯಿತು. ‘ಸಮ್ಮಿಶ್ರ ಸರಕಾರ ರಚನೆಗೆ ಮೊದಲು ನಾನು ನಮ್ಮ ಪಕ್ಷದ ಹಿರಿಯ ನಾಯಕ ಎಂ.ಪಿ.ಪ್ರಕಾಶ್ ಮನೆಗೆ ತೆರಳಿ ಅವರನ್ನೇ ಸಿಎಂ ಮಾಡಿ ಎಂದು ಮನವಿ ಮಾಡಿದ್ದೆ. ಆದರೆ, ಅವರು ತಾವು ದೇವೇಗೌಡರ ಜೊತೆ ಇರುವುದಾಗಿ ನನ್ನನ್ನು ಆಶೀರ್ವದಿಸಿ ಕಳುಹಿಸಿದ್ದರು ಎಂದು ಕುಮಾರಸ್ವಾಮಿ ಸ್ಮರಿಸಿದರು.
'ತಾನು ಸಿಎಂ ಆದ ಬಳಿಕ ಧರ್ಮಸಿಂಗ್ ಅವರ ಮನೆಗೆ ಹೋಗಿದ್ದೆ. ಅವರು ನನ್ನನ್ನು ತಮ್ಮ ಮಗನಂತೆ ಆಶೀರ್ವಾದ ಮಾಡಿ ಕಳುಹಿಸಿದ್ದರು. ಅವರು ಸಿಎಂ ಆಗಿ ಅಧಿಕಾರ ಕಳೆದುಕೊಂಡ 11 ವರ್ಷಗಳ ನಂತರ ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿಗೂ ಮತ್ತು ಅಧಿಕಾರಕ್ಕೂ ತಳುಕು ಹಾಕುವುದು ಸಲ್ಲ. ಸಾವಿನಲ್ಲಿ ರಾಜಕಾರಣ ಮಾಡಬಾರದು ಎಂದು ಬಿಎಸ್‌ವೈಗೆ ಚುಚ್ಚಿದರು.
ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಎಲ್ಲರನ್ನು ಕೂರಿಸಿದ ಸ್ಪೀಕರ್ ರಮೇಶ್ ಕುಮಾರ್, ರಾಜಕಾರಣದಲ್ಲಿ ಬಹಳಷ್ಟು ಘಟನೆಗಳು ನಡೆದಿರುತ್ತವೆ. ಅವುಗಳನ್ನು ಪದೇ ಪದೇ ಪ್ರಸ್ತಾಪಿಸುವುದು ಸಲ್ಲ. ವಯಸ್ಸಾದ ಕಾಲದಲ್ಲಿ ಉದ್ವೇಗಕ್ಕೆ ಒಳಗಾಗದೆ ಸಾಂವಿಧಾನಿಕ ಚೌಕಟ್ಟಿನಲ್ಲಿ ಚರ್ಚೆ ಮಾಡಿ ಸದನದ ಸಮಯವನ್ನು ಸದುಪಯೋಗ ಮಾಡಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.
‘ನಿಮ್ಮ ಸ್ಥಾನ ಮತ್ತು ಸಾರ್ವಜನಿಕ ಬದುಕಿನಲ್ಲಿ ನಿಮ್ಮ ಗೌರವ ಕಾಪಾಡಿಕೊಳ್ಳುವುದು ಮುಖ್ಯ. ಪ್ರಚೋದನೆಗೆ ಅವಕಾಶ ನೀಡಬೇಡಿ ಎಂದು ಅವರು, ಧರ್ಮಸಿಂಗ್ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ 11 ವರ್ಷಗಳ ಬಳಿಕ ಸಾವನ್ನಪ್ಪಿದ್ದು, ಅವರ ಸಾವಿಗೆ ಕುಮಾರಸ್ವಾಮಿ ಕಾರಣ ಎಂಬುದು ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ನಾನು ರೂಲಿಂಗ್ ನೀಡುತ್ತೇನೆ’ ಎಂದು ಚರ್ಚೆಗೆ ತೆರೆ ಎಳೆದರು.
‘ಧರ್ಮಸಿಂಗ್ ಬೆನ್ನಿಗೆ ಚೂರಿಗೆ ಹಾಕಿದ್ದೇನೆಂದು ನನ್ನ ಮೇಲೆ ಬಿಎಸ್‌ವೈ ಆರೋಪ ಮಾಡುತ್ತಿದ್ದಾರೆ. ಆದರೆ, ಸಮ್ಮಿಶ್ರ ಸರಕಾರದಲ್ಲಿ ಪಾಲುದಾರರಾಗಿದ್ದ ಯಡಿಯೂರಪ್ಪರ ಪಾತ್ರ ಇದರಲ್ಲಿ ಇಲ್ಲವೇ ? ರಾಜಕೀಯಕ್ಕಾಗಿ ಸಣ್ಣತನ ಪ್ರದರ್ಶನ ಅವರಿಗೆ ಶೋಭೆ ತರದು’
-ಕುಮಾರಸ್ವಾಮಿ ಮುಖ್ಯಮಂತ್ರಿ‘ನೀವು ಗದ್ದಲ ಮಾಡಿದರೆ ನಾನು ಬೆಲ್ ಬಾರಿಸುವುದಿಲ್ಲ, ಎದ್ದು ನಿಲ್ಲುವುದಿಲ್ಲ. ಎಲ್ಲ ಸದಸ್ಯರು ತಮ್ಮ ನಾಯಕರು ಮಾತನಾಡುವ ವೇಳೆ ಮಧ್ಯೆ ಎದ್ದು ನಿಲ್ಲುವುದು ಬೇಡ. ಉಭಯ ನಾಯಕರಿಗೆ ತಮ್ಮ ಮಾತನ್ನು ಸಮರ್ಥಿಸಿಕೊಳ್ಳುವ ಶಕ್ತಿ ಇದೆ’
-ರಮೇಶ್‌ಕುಮಾರ್, ಸ್ಪೀಕರ್







