ಅಡುಗೆ ಕೆಲಸಗಾರರ ವಜಾ: ಅಕ್ಷರ ದಾಸೋಹ ನೌಕರರಿಂದ ಧರಣಿ

ಕಾರ್ಕಳ, ಜು.9: ಕೆರ್ವಾಶೆ ಮೈನ್ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಿರುವುದರ ವಿರುದ್ಧ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಉಡುಪಿ ಜಿಲ್ಲಾ ಸಮಿತಿಯು ಸೋಮ ವಾರ ಕಾರ್ಕಳ ತಾಲೂಕು ಕಚೇರಿ ಎದುರು ಧರಣಿ ನಡೆಸಿತು.
ಕೆರ್ವಾಶೆ ಗ್ರಾಮದ ಮೈನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸುನೀತಾ ಶೆಟ್ಟಿ, ಗುಲಾಬಿ ಹಾಗೂ ಸುಗಂಧಿ ಅವರನ್ನು ಜೂ.12 ರಂದು ಯಾವುದೇ ಕಾರಣ ನೀಡದೆ ಕೆಲಸದಿಂದ ತೆಗೆದು ಹಾಕಲಾಗಿದೆ. ಸಂಘದ ಕಾರ್ಕಳ ತಾಲೂಕು ಅಧ್ಯಕ್ಷರಾಗಿರುವ ಸುನೀತಾ ಶೆಟ್ಟಿ, ಶಾಲೆಯ ಅಡುಗೆ ಸಾಮಾನುಗಳ ದುರುಪಯೋಗದ ವಿರುದ್ಧ ಧ್ವನಿ ಎತ್ತಿದ್ದರು. ಇದೇ ಕಾರಣಕ್ಕೆ ಮುಖ್ಯೋಪಾಧ್ಯಾಯರು ಸೇಡಿನ ಕ್ರಮ ಕೈಗೊಂಡಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.
ಆದುದರಿಂದ ಕೂಡಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಂಟಿ ಸಭೆಯನ್ನು ಕರೆದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದ್ದಾರೆ. ಈ ಕುರಿತು ಮನವಿಯನ್ನು ಕಾರ್ಕಳ ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಭಾಸ್ಕರ್ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಯು.ದಾಸು ಭಂಡಾರಿ, ಕಾರ್ಯ ದರ್ಶಿ ಸುನಂದಾ, ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕವಿರಾಜ್ ಎಸ್. ಮೊದಲಾದವರು ಉಪಸ್ಥಿತರಿದ್ದರು.





