ಶುದ್ಧ ನೀರಿನ ಘಟಕಗಳ ನಿರ್ವಹಣೆ ಖಾಸಗಿ ಸಂಸ್ಥೆಗಳಿಗೆ ವಹಿಸಲು ಚಿಂತನೆ: ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಜು.9: ಶುದ್ಧ ನೀರಿನ ಘಟಕಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಸೋಮವಾರ ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಕವಟಗಿಮಠ 330ರ ಅಡಿಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಶುದ್ಧ ನೀರಿನ ಘಟಕಗಳನ್ನು ಗ್ರಾಮ ಪಂಚಾಯತ್‌ಗಳಿಂದ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಖಾಸಗಿ ಸಂಸ್ಥೆಗಳಿಗೆ ವಹಿಸಿ, ಕೆಟ್ಟುನಿಂತ ಘಟಕಗಳನ್ನು ಕೇವಲ ಎರಡು-ಮೂರು ದಿನಗಳಲ್ಲಿ ದುರಸ್ಥಿಗೊಳಿಸಲು ಸೂಚಿಸಲಾಗುವುದು. ನಿಗದಿತ ವೇಳೆಯಲ್ಲಿ ದುರಸ್ಥಿಗೊಳಿಸಲು ವಿಫಲವಾದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಜು.15ರೊಳಗೆ ದುರಸ್ಥಿ: 2011-12ರಿಂದ ಇಲ್ಲಿಯವರೆಗೆ ಒಟ್ಟಾರೆ 14,305 ಶುದ್ಧ ನೀರು ಘಟಕಗಳನ್ನು ಸ್ಥಾಪಿಸಲಾಗಿದ್ದು, 13,597 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 2,498 ಘಟಕಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇವುಗಳನ್ನು ಜು.15ರೊಳಗೆ ಕಾರ್ಯನಿರ್ವಹಿಸುವಂತೆ ದುರಸ್ಥಿಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಸದನ ಸಮಿತಿಗೆ ವಿಪಕ್ಷ ಒತ್ತಾಯ: ಶುದ್ಧ ನೀರಿನ ಘಟಕಗಳು ಸ್ಥಾಪಿಸಿದ ಕೆಲವೆ ತಿಂಗಳಿಗೆ ಕೆಟ್ಟು ಹೋಗುತ್ತಿವೆ. ಘಟಕಗಳ ಸ್ಥಾಪನೆಗೆ ಅಗತ್ಯವಾಗಿರುವ ಉಪಕರಣಗಳನ್ನು ಸರಬರಾಜು ಮಾಡುವಂತಹ ಕಂಪೆನಿಗಳು ಕಳಪೆ ಗುಣ ಮಟ್ಟದ ಉಪಕರಣಗಳನ್ನು ಸರಬರಾಜು ಮಾಡುತ್ತಿವೆ. ಜನತೆಗೆ ಶುದ್ಧ ನೀರು ಒದಗಿಸುವ ಯೋಜನೆಯಲ್ಲೂ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಈ ಕುರಿತು ಸಮಗ್ರ ತನಿಖೆಗೆ ಸದನ ಸಮಿತಿ ರಚಿಸಬೇಕೆಂದು ವಿಪಕ್ಷಗಳು ಒತ್ತಾಯಿಸಿದರು.
ಈ ವೇಳೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಇಲ್ಲಿಯವರೆಗೂ ಸ್ಥಾಪನೆಗೊಂಡಿರುವ ಶುದ್ಧ ನೀರಿನ ಘಟಕಗಳಲ್ಲಿ ಶೇ.50ರಷ್ಟು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಘಟಕಗಳ ಅವಳಡಿಕೆಯ ಕ್ರಮವು ಅವೈಜ್ಞಾನಿಕವಾಗಿದೆ. ಹೀಗಾಗಿ ಜನಪರ ಯೋಜನೆಯೊಂದು ಭ್ರಷ್ಟಾಚಾರಕ್ಕೆ ತುತ್ತಾಗಿದ್ದು, ಇವುಗಳ ಸಮಗ್ರ ತನಿಖೆಗೆ ಸದನ ಸಮಿತಿ ರಚಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಬಿಜೆಪಿ ರುದ್ರೇಶ್‌ಗೌಡ, ಪ್ರದೀಪ್ ಶೆಟ್ಟರ್, ಪ್ರಾಣೇಶ್ ಧ್ವನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ, ರಾಜ್ಯದ ಎಲ್ಲ ಜನತೆಗೂ ಶುದ್ಧ ನೀರು ಸಿಗಬೇಕೆಂಬ ಸದುದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇವುಗಳ ಬಗ್ಗೆ ಯಾವ ಪಕ್ಷಗಳಿಗೂ ಸ್ವಹಿತಾಸಕ್ತಿಯಿಲ್ಲ. ಹೀಗಾಗಿ ಕಳಪೆ ಉಪಕರಣಗಳನ್ನು ಸರಬರಾಜು ಮಾಡಿದ ಕಂಪೆನಿಗಳಿಗೆ ದಂಡ ಹಾಕಿ ಸುಮಾರು 8 ಕೋಟಿ ರೂ.ಗೂ ಹೆಚ್ಚು ಹಣವನ್ನು ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಶುದ್ಧ ನೀರಿನ ಘಟಕಗಳು ಸುಸಜ್ಜಿತವಾಗಿ ಕಾರ್ಯನಿರ್ವಹಿಸುವಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಮುಂದಿನ ವಾರ ಪರಿಷತ್‌ನ ಸ್ಥಳೀಯ ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇನೆ. ಆದಾಗ್ಯು ವಿಪಕ್ಷ ಸದಸ್ಯರಿಗೆ ಸಮಾಧಾನ ಆಗದಿದ್ದರೆ ಸದನ ಸಮಿತಿ ರಚನೆಗೆ ಒಪ್ಪಿಗೆ ಸೂಚಿಸುತ್ತೇನೆಂದು ವಿಪಕ್ಷಗಳ ಸದಸ್ಯರಿಗೆ ಉತ್ತರ ನೀಡಿದರು.
ಸಚಿವರ ಉತ್ತರವನ್ನು ಒಪ್ಪಿಕೊಳ್ಳದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಂದಿನ ವಾರ ನಡೆಯುವ ಚರ್ಚೆಯಲ್ಲಿ ಏನಾಗಲಿದೆ ಎಂಬುದು ಈಗಲೆ ನಮಗೆ ಗೊತ್ತಿದೆ. ಆ ಚರ್ಚೆಗೆ ನಮ್ಮ ಒಪ್ಪಿಗೆ ಇಲ್ಲ. ಈಗಲೆ ಸದನ ಸಮಿತಿ ರಚನೆಗೆ ಒಪ್ಪಿಗೆ ಸೂಚಿಸಬೇಕೆಂದು ಪಟ್ಟು ಹಿಡಿದರು.
ಈ ವೇಳೆ ಕಾಂಗ್ರೆಸ್ ಹಿರಿಯ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡಿ, ಪ್ರತಿಯೊಂದು ಪ್ರಕರಣಕ್ಕೂ ಸದನ ಸಮಿತಿ ರಚಿಸಲು ಸಾಧ್ಯವಾಗುವುದಿಲ್ಲ. ಒಂದು ಪ್ರಕರಣದಲ್ಲಿ ಸದನ ಸಮಿತಿ ರಚನೆಗೆ ಒಪ್ಪಿಗೆ ಸೂಚಿಸಿದರೆ, ಪ್ರತಿ ಪ್ರಕರಣಕ್ಕೂ ಒತ್ತಾಯಿಸಲಾಗುತ್ತದೆ. ಆದರೂ ಸಚಿವರು ವಿಪಕ್ಷ ಸದಸ್ಯರೊಂದಿಗೆ ಸಭೆ ನಡೆಸಿ, ಸಭೆಯ ನಿರ್ಣಯಗಳು ಒಪ್ಪಿಗೆ ಆಗದಿದ್ದರೆ ಸದನ ಸಮಿತಿ ರಚಿಸಲು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ವಿಪಕ್ಷ ಸದಸ್ಯರು ಸಚಿವರಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಒಪ್ಪಿಗೆ ಸೂಚಿಸಿದರು.







