ಜಪಾನ್ ನಲ್ಲಿ ಮಳೆಗೆ ನೂರು ಬಲಿ

ಟೋಕಿಯೊ, ಜು.9: ಮಳೆಯ ಆರ್ಭಟದಿಂದ ಭೂಕುಸಿತ, ನೆರೆ ಹಾವಳಿಗೆ ತುತ್ತಾಗಿರುವ ಜಪಾನ್‌ನಲ್ಲಿ ಮೃತರ ಸಂಖ್ಯೆ ನೂರಕ್ಕೆ ತಲುಪಿದ್ದು ಸೋಮವಾರ ನೆರೆನೀರು ಕಡಿಮೆಯಾದ ಕಾರಣ ರಕ್ಷಣಾ ತಂಡ ಇದುವರೆಗೆ ಸಂಪರ್ಕಿಸಲು ಸಾಧ್ಯವಾಗದ ಪ್ರದೇಶಗಳಿಗೆ ತೆರಳಿ ಜನರ ರಕ್ಷಣಾ ಕಾರ್ಯವನ್ನು ನಡೆಸಿದರು.
ಕಳೆದ ವಾರದ ಕೊನೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿದು ಇಡೀ ಗ್ರಾಮವೇ ನೀರಿನಲ್ಲಿ ಮುಳುಗಿದೆ. ಅಲ್ಲಿ ನೀರಿನ ಮಧ್ಯೆ ಸಿಲುಕಿರುವ ಜನರ ರಕ್ಷಣೆಯನ್ನು ಹೆಲಿಕಾಪ್ಟರ್ ಮೂಲಕ ನಡೆಸಲಾಗಿದೆ. ಮಳೆಯಿಂದಾಗಿ ಬೆಟ್ಟಗುಡ್ಡಗಳ ಮಣ್ಣು ಮೃದುವಾಗಿದ್ದು ಯಾವುದೇ ಸಂದರ್ಭದಲ್ಲೂ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸೋಮವಾರ ಬೆಳಿಗ್ಗೆ ಮಳೆ ಕಡಿಮೆಯಾಗಿ ಬಿಸಿಲು ಕಾಣಲು ಆರಂಭವಾಗಿದ್ದು ಮಣ್ಣಿನಲ್ಲಿ ಸಿಲುಕಿ ಇನ್ನೂ ಜೀವಂತವಾಗಿರಬಹುದಾದ ಜನರಿಗಾಗಿ ರಕ್ಷಣಾ ತಂಡ ಹುಡುಕಾಟ ನಡೆಸುತ್ತಿದೆ. ಮಳೆಯಿಂದ ಉಂಟಾದ ದುರ್ಘಟನೆಗಳಲ್ಲಿ ಮೃತರ ಸಂಖ್ಯೆ ನೂರಕ್ಕೆ ತಲುಪಿದ್ದು ಈ ಪ್ರಮಾಣವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





