ಸೈಕಲ್ ರವಿ ಬಂಧನ ಪ್ರಕರಣ: ನಟ ಸಾಧುಕೋಕಿಲ ದಿಢೀರ್ ಸಿಸಿಬಿ ಕಚೇರಿಗೆ ಹಾಜರು

ಬೆಂಗಳೂರು, ಜು.9: ರೌಡಿ ಶೀಟರ್ ಸೈಕಲ್ ರವಿ ಬಂಧನ ಪ್ರಕರಣ ಸಂಬಂಧ ಆರೋಪಿ ಜೊತೆ ಸಂಪರ್ಕ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಸಾಧು ಕೋಕಿಲ ಸಿಸಿಬಿ ಕಚೇರಿಗೆ ಹಾಜರಾದರು.
ಸೋಮವಾರ ನಗರದ ಸಿಸಿಬಿ ಚಾಮರಾಜಪೇಟೆಯಲ್ಲಿರುವ ಕೇಂದ್ರ ಕಚೇರಿಗೆ ದಿಢೀರ್ ಹಾಜರಾದರು. ಅಲ್ಲದೆ, ಸೈಕಲ್ ರವಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ಸಾಧು ಕೋಕಿಲ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಯಾವುದೇ ರೀತಿಯ ನೋಟಿಸ್ ನೀಡಿರಲಿಲ್ಲ ಎನ್ನಲಾಗಿದೆ.
ಆದರೆ, ಕೆಲವು ಮಾಧ್ಯಮಗಳಲ್ಲಿ ರೌಡಿಯ ಜತೆಗೆ ತಮ್ಮ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಸಾಧು ಕೋಕಿಲ ಸಿಸಿಬಿ ಕಚೇರಿಗೆ ಬಂದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಎಸಿಪಿ ಸುಬ್ರಹ್ಮಣ್ಯ ಅವರನ್ನು ಭೇಟಿಯಾಗಿದ್ದ ಸಾಧು ಕೋಕಿಲ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದುವರೆಗಿನ ತನಿಖೆಯಲ್ಲಿ ನಿಮ್ಮ ಪಾತ್ರದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಸುಬ್ರಹ್ಮಣ್ಯ ಅವರು ನಟ ಸಾಧು ಕೋಕಿಲ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.





