ಬೀಡಿ ಕಾರ್ಮಿಕರ ಮೇಲೆ ನಡೆಸುವ ವಂಚನೆ ನಿಲ್ಲಿಸಿ ಬಿ.ಎಂ.ಭಟ್

ಪುತ್ತೂರು, ಜು. 9: ''ಕಾರ್ಮಿಕ ದ್ರೋಹಿಗಳಿಂದ ಬೀಡಿ ಕಾರ್ಮಿಕರ ಮೇಲೆ ನಿರಂತರ ವಂಚನೆ ನಡೆಯುತ್ತಿದ್ದು, ಈ ವಂಚನೆಯನ್ನು ತಕ್ಷಣವೇ ನಿಲ್ಲಿಸಿ ಕಾರ್ಮಿಕರು ಸಿಡಿದೆದ್ದರೆ ನೀವ್ಯಾರೂ ಉಳಿಯಲಾರಿರಿ'' ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಬಿ.ಎಂ.ಭಟ್ ಎಚ್ಚರಿಸಿದರು.
ಅವರು ಸೋಮವಾರ ಸಿಐಟಿಯು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಪುತ್ತೂರು ಮಿನಿ ವಿಧಾನ ಸೌದದ ಮುಂಬಾಗ ಬೀಡಿ ಕಾರ್ಮಿಕರುಗಳಿಗೆ ಕಳೆದ ಮೂರು ವರ್ಷಗಳಿಂದ ಬಾಕಿಯಾದ ತುಟ್ಟೀಭತ್ತೆ ತಲಾ ರೂ12,000 ಮತ್ತು ಎ.1 ರಿಂದ ನಿಗದಿಯಾದ ಕನಿಷ್ಟ ಕೂಲಿ 1000 ಬೀಡಿಗೆ ರೂ 220-52 ಜಾರಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತಾಡಿದರು.
ಕಾರ್ಮಿಕರ ಕಾನೂನು ಬದ್ದ ಸವಲತ್ತನ್ನ ಕೊಡಿಸಲಾಗದ ಸರಕಾರ ದೇಶದ ಕಾನೂನು ವ್ಯವಸ್ಥೆಗೆ ವಿರೋದಿಗಳು. ಮಾಲಕರ ಹಿತ ರಕ್ಷಕರಾದ ಕೆಲವು ದುಷ್ಟ ಕಾರ್ಮಿಕ ನಾಯಕರು ಕಾರ್ಮಿಕರ ಪರ ಹೋರಾಟ ನಡೆಸುತ್ತಾ ಅವರನ್ನು ವಂಚಿಸುತ್ತಿದ್ದಾರೆ. ಇವರು ಕಾರ್ಮಿಕ ವರ್ಗದ ಮೊದಲ ಶತ್ರುಗಳು ಎಂದ ಅವರು ಮುಂದಿನ ಹೋರಾಟದ ಭಾಗವಾಗಿ ಕಾರ್ಮಿಕರ ಸಹಿ ಸಂಗ್ರಹ ಮಾಡಿ ಕೇಂದ್ರ ಕಾರ್ಮಿಕ ಸಂಘಟನೆಗಳ ಕೇಂದ್ರಗಳಿಗೆ, ರಾಷ್ಟ್ರಪತಿಗಳಿಗೆ, ಕಾರ್ಮಿಕ ಸಚಿವಾಲಯಕ್ಕೆ, ಹಾಗೂ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಗಳಿಗೆ ಕಳುಹಿಸಲಾಗುವುದು ಎಂದರು.
ಬೀಡಿ ಕಾರ್ಮಿಕರ ಹಿತವನ್ನು ಬಯಸುವ ಸಮಾನ ಮನಸ್ಕ, ಸಮಾಜ ಸೇವಕರನ್ನು, ಗಣ್ಯರನ್ನು, ಒಟ್ಟು ಸೇರಿಸಿ ಒಂದು ವೇದಿಕೆ ರಚಿಸಿ ಮುಂದಿನ ತಿಂಗಳು ಜಿಲ್ಲಾಧಿಕಾರಿ ಕಚೇರಿಗೆ ಬೀಡಿ ಕಾರ್ಮಿಕರ ಮುತ್ತಿಗೆ ನಡೆಸುವ ಕಾರ್ಯಕ್ರಮ ನಡೆಸಲಿದ್ದೇವೆ ಎಂದ ಅವರು ಹೈಕೋರ್ಟು ಆದೇಶ ಹಾಗೂ ಸರಕಾರದ ಅಧಿಸೂಚನೆ ಆಗಿ ಒಂದು ವರ್ಷ ಕಳೆದರೂ ಕಾರ್ಮಿಕರಿಗೆ ನೀಡದೆ ಕಾನೂನು ಉಲ್ಲಂಘನೆ ಮಾಡಿದ ಮಾಲಕರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಚಿಂತನೆ ನಡೆಸಲಾಗುದು. ಬೀಡಿ ಕಾರ್ಮಿಕರಿಗೆ ಈ ಬಾಕಿ ಹಾಗೂ ಬೋನಸ್ ಇನ್ನಿತರ ಸವಲತ್ತುಗಳನ್ನು ಮತ್ತು ಬೀಡಿ ವೇತನವನ್ನು ಇನ್ನು ಮುಂದೆ ಕಾರ್ಮಿಕ ಬ್ಯಾಂಕ್ ಖಾತೆಗೆ ಅಥವಾ ಚಕ್ ಮೂಲಕ ಪಾವತಿಸುವ ಕ್ರಮ ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.
ಕಮ್ಯೂನಿಸ್ಟ್ ಮುಖಂ ಶ್ಯಾಮರಾಜ್, ಆದಿವಾಸಿ ಸಂಘಟನೆಯ ಮುಖಂಡ ವಿಠಲ ಮಲೆಕುಡಿಯ ಮಾತನಾಡಿ ಬೀಡಿ ಕಾರ್ಮಿಕರಿಗೆ ಆಗುತ್ತಿರುವ ವಂಚನೆಯನ್ನು ತಡೆಯಲು ಸಂಘಟಿತ ಹೋರಾಟ ನಡೆಸುವಂತೆ ಕರೆ ನೀಡಿದರು.
ಸಂಘದ ಅದ್ಯಕ್ಷರಾದ ಗುಡ್ಡಪ್ಪ ಗೌಡ ಸರ್ವೆ, ಮುಖಂಡರಾದ ಕೇಶವ ಗೌಡ ಪುತ್ತೂರು, ವಿಜಯ ರೈ, ಜಾನಕಿ ಕೊಪ್ಪ, ಪದ್ಮಾವತಿ ಹೀರೇಬಂಡಾಡಿ, ಬಿಸಿಯೂಟ ತಾಲೂಕು ಅದ್ಯಕ್ಷರಾದ ಶ್ರೀಮತಿ ರತ್ನ ಕೆಮ್ಮಾಯಿ, ಯಶೋಧ ಮೂರಾಜೆ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕಾರ್ಮಿಕ ಮುಖಂಡರುಗಳಾದ ನೆಬಿಸಾ, ಜಯರಾಮ ಮಯ್ಯ, ಜಯಶ್ರೀ, ಸಂಜೀವ ನಾಯ್ಕ, ದನಂಜಯ ಗೌಡ, ಡೊಂಬಯ ಗೌಡ, ಪುಷ್ಪಾ, ಇಂದಿರಾ, ಪೆರ್ನು ಗೌಡ, ಸುಜಾತ ಹೆಗ್ಡೆ, ಹಾಗೂ ದ.ಕ. ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಕುದ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಪುತ್ತೂರು ಸಹಾಯಕ ಕಮೀಶನರ್ ಹೆಚ್. ಕೆ. ಕೃಷ್ಣಮೂರ್ತಿ ಮನವಿ ಸ್ವೀಕರಿಸಿದರು. ಕಾರ್ಮಿಕ ಮುಖಂಡೆ ದೇವಕಿ ಸ್ವಾಗತಿಸಿ ವಂದಿಸಿದರು.







