ಹೊಣೆಗಾರಿಕೆ ಜೊತೆ ನ್ಯಾಯಕ್ಕೆ ಒತ್ತುಕೊಡುವ ಜನಪ್ರತಿನಿಧಿಗಳು ಬೇಕು: ಎನ್.ಸಂತೋಷ್ ಹೆಗ್ಡೆ

ಉಳ್ಳಾಲ, ಜು. 9: ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಜೊತೆಗೆ ನ್ಯಾಯಕ್ಕೆ ಒತ್ತು ಕೊಡುವಂತಹ ಜನಪ್ರತಿನಿಧಿಗಳು ಬೇಕಿದೆ. ಬಡವರಿಗೆ ಪ್ರಾಮಾಣಿಕವಾಗಿ ಜೀವನ ನಡೆಸುವಂತಹ ವ್ಯವಸ್ಥೆಗಳು ಜಾರಿಯಾಗಬೇಕಿದೆ. ಈ ಮೂಲಕ ರಾಜಧರ್ಮಗಳನ್ನು ಪಾಲಿಸಿ ಆಡಳಿತ ನಡೆಸಬೇಕಿದೆ. ಆದರೆ ದೇಶದಲ್ಲಿ ಪ್ರತಿ ಸರಕಾರಗಳು ಕೋಟ್ಯಂತರ ಭ್ರಷ್ಟಾಚಾರಗಳನ್ನು ನಡೆಸುತ್ತಾ ಬಂದಿರುವುದರಿಂದ ಬಡವರು ಹಾಗೆಯೇ ಉಳಿದರೆ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ದೇರಳಕಟ್ಟೆ ಕ್ಷೇಮ ಸಭಾಂಗಣದಲ್ಲಿ ಸೋಮವಾರ ನಡೆದ ಡಾ.ಎನ್.ಶ್ರೀಧರ್ ಶೆಟ್ಟಿ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಆಡಳಿತ ಪ್ರಜೆಗಳ ಹಕ್ಕು' ಎಂಬ ವಿಚಾರದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸಾಮಾಜಿಕ ಚಿಂತನಗೆಳನ್ನು ಬದಲಾಯಿಸುವ ಮೂಲಕ ತಮ್ಮ ಹಕ್ಕುಗಳಿಗೆ ಹೋರಾಟ ನಡೆಸುವಂತಹ ಮನೋಭಾವ ಪ್ರತಿಯೊಬ್ಬರಲ್ಲಿ ಬೆಳೆದು ನಿಂತಾಗ ಒಂದು ಹಂತಕ್ಕೆ ದೇಶವನ್ನು ಸರಿದಾರಿಗೆ ತರಲು ಸಾಧ್ಯ. ಒಂದು ಕಡೆ ಲೋಕಾಯುಕ್ತ ಬಲಪಡಿಸುವ ಬಗ್ಗೆ ಮಾತನಾಡುವ ಸರ್ಕಾರ ಮತ್ತೊಂದು ಅಧಿಕಾರ ಕಸಿದು ಹೊಸ ಸಂಸ್ಥೆ ರಚಿಸುತ್ತದೆ. ಸರ್ಕಾರದ ಇಂತಹ ತಪ್ಪು ಹೆಜ್ಜೆ ಬಗ್ಗೆ ಜನರು ಧ್ವನಿ ಎತ್ತಬೇಕಾಗಿದೆ. ಶಿಕ್ಷಣ, ಆರೋಗ್ಯಕ್ಕೆ ಸರ್ಕಾರ ಆದ್ಯತೆ ನೀಡಬೇಕಾಗಿದೆ. ಆದರೆ ಸರ್ಕಾರೀ ಮಟ್ಟದ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರದ ವೈಫಲ್ಯದಿಂದ ಜನರು ಖಾಸಗಿಯತ್ತ ವಾಲುತ್ತಿದ್ದಾರೆ. ದಂಪತಿ ಜೀವನ ನಿರ್ವಹಣೆಗಾಗಿ ಕಠಿಣ ಪರಿಶ್ರಮಪಡುವಾಗ ಮಕ್ಕಳು ಕಂಪ್ಯೂಟರ್, ಅಂತರ್ಜಾಲದಲ್ಲಿ ಕಾಲ ಕಳೆಯುವಂತಹ ದಿನಗಳು ಮುಂದಿವೆ. ಇಂತಹ ಮಕ್ಕಳಿಗೆ ನೀತಿಪಾಠದ ಅವಶ್ಯಕತೆ ಇದೆ. ಅದು ಮನೆಯಿಂದಲೇ ನೀತಿ ಪಾಠ ಆರಂಭವಾಗಬೇಕು. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಅವಶ್ಯಕತೆಯಿಲ್ಲ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕಿದೆ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬೆಳೆಯಬೇಕಿದೆ ಎಂದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ನಿಟ್ಟೆ ವಿವಿ ಉಪಕುಲಾಧಿಪತಿ ಡಾ.ಎಂ.ಶಾಂತರಾಮ್ ಶೆಟ್ಟಿ, ಡಾ.ಸತೀಶ್ ಕುಮಾರ್ ಭಂಡಾರಿ, ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ನಿಟ್ಟೆ ವಿವ ಕುಲಸಚಿವೆ ಡಾ.ಅಲ್ಕಾ ಕುಲಕರ್ಣಿ, ದಂತ ಚ ಸ್ಥಾಪಕ ಡೀನ್ ಡಾ.ಶ್ರೀಧರ್ ಶೆಟ್ಟಿ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಶಿಶಿರ್ ಶೆಟ್ಟಿ ಸ್ವಾಗತಿಸಿದರು. ಪ್ರೊ.ಜಿ.ಸುಭಾಷ್ ಬಾಬು ಹಾಗೂ ಪ್ರೊ.ರಾಹುಲ್ ಭಂಡಾರಿ ಅತಿಥಿ ಪರಿಚಯ ನೀಡಿದರು. ಡಾ.ನಿತೇಶ್ ಶೆಟ್ಟಿ ವಂದಿಸಿದರು. ಡಾ.ಕ್ಷಾ ಕಾರ್ಯಕ್ರಮ ನಿರೂಪಿಸಿದರು.







