ಚಿಕ್ಕಮಗಳೂರು: ಐವರು ಕುಖ್ಯಾತ ಅರಣ್ಯಗಳ್ಳರ ಬಂಧನ

ಚಿಕ್ಕಮಗಳೂರು, ಜು.7: ಚಿರತೆ, ಕಾಡಮ್ಮೆ, ಜಿಂಕೆ, ಆನೆ, ಚಿಪ್ಪುಹಂದಿ ಮತ್ತಿತರ ವನ್ಯಜೀವಿಗಳನ್ನು ಕೊಂದು ಅವುಗಳ ಚರ್ಮ, ಕೊಂಬು, ಉಗುರು, ಚಿಪ್ಪು, ಆನೆ ದಂತಗಳನ್ನು ಮಾರಾಟ ಮಾಡುತ್ತಿದ್ದ ಕುಖ್ಯಾತ ಅರಣ್ಯಗಳ್ಳರ ಜಾಲದ ಐವರನ್ನು ತರೀಕೆರೆ ತಾಲೂಕಿನ ಲಕ್ಕವಳ್ಳಿ ವನ್ಯಜೀವಿ ಸಂರಕ್ಷಣಾಧಿಕಾರಿಗಳ ತಂಡ ರವಿವಾರ ಸಂಜೆ ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಮಂಗಳೂರು ಮೂಲದ ಅಝೀಝ್ ಬೆಂಜಾಲ್, ಅಹ್ಮದ್ ಕುಂಞಿ, ತರೀಕೆರೆ ಮೂಲದ ಮಂಜ ನಾಯ್ಕಿ, ಕುಮಾರ ನಾಯ್ಕಿ, ನಿಂಗಾ ನಾಯ್ಕಿ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿರತೆ ಚರ್ಮ, ಕಾಡು ಕೋಣ, ಜಿಂಕೆಗಳ ಕೊಂಬುಗಳು, ಆನೆದಂತಗಳನ್ನು ವಶಕ್ಕೆ ಪಡೆಯಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಕಾರೊಂದನ್ನು ಅರಣ್ಯಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇತ್ತೀಚೆಗೆ ಭದ್ರಾ ಹುಲಿ ಅಭಯಾರಣ್ಯ ವ್ಯಾಪ್ತಿಯ ತರೀಕೆರೆ ತಾಲೂಕು ಲಕ್ಕವಳ್ಳಿ ವನ್ಯ ಜೀವಿ ವಲಯದ ವನ್ಯ ಜೀವಿ ಸಂರಕ್ಷಣಾಧಿಕಾರಿಗಳ ತಂಡ ವನ್ಯ ಜೀವಿಗಳನ್ನು ಬೇಟೆಯಾಡಿ ಅವುಗಳ ಚರ್ಮ, ದಂತ, ಕೊಂಬುಗಳನ್ನು ಕಳ್ಳಸಾಗಣೆ ಮೂಲಕ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ಕಳ್ಳರ ಜಾಲದ ನಾಲ್ವರು ಆರೋಪಿಗಳನ್ನು ಮಾರು ವೇಷದಲ್ಲಿ ಹೋಗಿ ಬಂಧಿಸಿದ್ದರು.
ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ರವಿವಾರ ಸಂಜೆ ತರೀಕೆರೆ ಪಟ್ಟಣದಲ್ಲಿ ಕಾರೊಂದರಲ್ಲಿ ಆರೋಪಿಗಳು ಕಾಡು ಪ್ರಾಣಿಗಳ ಕೊಂಬು, ದಂತ, ಚಿರತೆ ಚರ್ಮಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಲಕ್ಕವಳ್ಳಿ ವನ್ಯಜೀವಿ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ ನೇತೃತ್ವದ ತಂಡ ಆರೋಪಿಗಳ ಕಾರಿನ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.







