ಬಿಬಿಎಂಪಿ ಪೌರ ಕಾರ್ಮಿಕ ಆತ್ಮಹತ್ಯೆ ಪ್ರಕರಣ: ಪತ್ನಿಗೆ ಸರಕಾರಿ ಉದ್ಯೋಗ ನೀಡಲು ಬಿಜೆಪಿ ಒತ್ತಾಯ

ಬೆಂಗಳೂರು, ಜು.10: ಬಿಬಿಎಂಪಿ ವೇತನ ನೀಡದ ಕಾರಣದಿಂದಾಗಿ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸುಬ್ರಮಣಿ ಪತ್ನಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ಇಂದಿಲ್ಲಿ ಒತ್ತಾಯಿಸಿದರು.
ಮಂಗಳವಾರ ನಗರದ ಮಲ್ಲೇಶ್ವರನ ಬಿಬಿಎಂಪಿ ಕಚೇರಿ ಮುಂಭಾಗ ಬೆಂಗಳೂರು ಮಹಾನಗರ ಬಿಜೆಪಿ ಸದಸ್ಯರು ಹಮ್ಮಿಕೊಂಡಿದ್ದ, ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೃತ ಸುಬ್ರಮಣಿ ಕುಟುಂಬಕ್ಕೆ ಪರಿಹಾರದ ಜೊತೆಗೆ ಅವರ ಪತ್ನಿಗೆ ಸರಕಾರಿ ಉದ್ಯೋಗ ಹಾಗೂ ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡಬೇಕಾದ ಜವಾಬ್ದಾರಿ ರಾಜ್ಯದ ಸಮ್ಮಿಶ್ರ ಸರಕಾರದ ಮೇಲಿದೆ ಎಂದರು.
ರಾಜ್ಯ ಸರಕಾರಕ್ಕೆ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಸಾವಿರಾರು ಕೋಟಿ ರೂಪಾಯಿಗಳಿವೆ. ಆದರೆ, ಬಡ ಪೌರ ಕಾರ್ಮಿಕರಿಗೆ ವೇತನ ನೀಡಲು ಹಣವಿಲ್ಲ ಎನ್ನುವುದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.
ಬರೋಬ್ಬರಿ ಏಳು ತಿಂಗಳಿನಿಂದ ಪೌರ ಕಾರ್ಮಿಕರಿಗೆ ವೇತನ ನೀಡುತ್ತಿಲ್ಲ. ಇದರಿಂದ ನೊಂದ ಸುಬ್ರಮಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿನಃ, ಬೇರೆ ಯಾವುದೇ ಕಾರಣ ಇಲ್ಲ. ರಾಜ್ಯ ಸರಕಾರ ಹಾಗೂ ಬಿಬಿಎಂಪಿ ನಿರ್ಲಕ್ಷದಿಂದ ಪೌರ ಕಾರ್ಮಿಕರ ಬದುಕು ಬೀದಿ ಪಾಲಾಗಿದೆ ಎಂದು ಆರೋಪಿಸಿದರು.
ರಾಜೀನಾಮೆ: ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಪೌರ ಕಾರ್ಮಿಕನ ಸಾವಿಗೆ ಪಾಲಿಕೆಯ ಮೇಯರ್ ಸಂಪತ್ ರಾಜ್ ನೇರ ಕಾರಣವಾಗಿದ್ದು, ಅವರು ಈ ಕೂಡಲೇ ರಾಜೀನಾಮೆ ನೀಡಬೇಕು. ಅಷ್ಟೇ ಅಲ್ಲದೆ, ಇಂತಹ ದುರ್ಘಟನೆ ಮತ್ತೆ ಸಂಭವಿಸದ ರೀತಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಮೃತ ಸುಬ್ರಮಣಿ ಕುಟುಂಬಕ್ಕೆ ಪರಿಹಾರದ ಜೊತೆಗೆ ಅವರ ಪತ್ನಿಗೆ ಉದ್ಯೋಗ ನೀಡಲಾಗುವುದು.
-ಆರ್.ಸಂಪತ್ ರಾಜ್, ಪಾಲಿಕೆ ಮೇಯರ್







