ಮಾಜಿ ಸಚಿವ ಬಿ.ಎ.ಮೊಹಿದಿನ್ ನಿಧನ: ರಾಜಕೀಯ ನಾಯಕರ ಸಂತಾಪ
ಬೆಂಗಳೂರು, ಜು.10: ಮಾಜಿ ಸಚಿವ ಬಿ.ಎ.ಮೊಹಿದಿನ್ ನಿಧನಕ್ಕೆ ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್ ಹಾಗೂ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ವಾರ್ಥ ರಹಿತ ವ್ಯಕ್ತಿತ್ವವನ್ನು ಹೊಂದಿದ್ದ ಬಿ.ಎ.ಮೊಹಿದಿನ್ ಒಬ್ಬ ಉನ್ನತಮಟ್ಟದ ನಾಯಕ. ರಾಜ್ಯದ ಮುಸ್ಲಿಮರು ಅದರಲ್ಲೂ ಪ್ರಮುಖವಾಗಿ ಕರಾವಳಿ ಭಾಗದ ಮುಸ್ಲಿಮರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ ಮಹನೀಯ. ಅವರ ಪ್ರೋತ್ಸಾಹದ ಪರಿಣಾಮವಾಗಿ ಕರಾವಳಿ ಭಾಗದಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಹಲವಾರು ಶಾಲೆಗಳು ತೆರೆಯಲ್ಪಟ್ಟವು. ಜೆ.ಎಚ್.ಪಟೇಲ್ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದ ಮೊಹಿದಿನ್, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ತಂದ್ದಿದ್ದನ್ನು ಮರೆಯುವಂತಿಲ್ಲ. ಎಲ್ಲ ಜನ ಸಮುದಾಯಗಳಿಂದ ಗೌರವಿಸಲ್ಪಡುವ ಕಾಂಗ್ರೆಸ್ ನಾಯಕರಾಗಿದ್ದ ಮೊಹಿದಿನ್, ಅವರ ನಿಧನವು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಸರ್ವಶಕ್ತನಾದ ಅಲ್ಲಾಹ್ ಅವರ ಆತ್ಮಕ್ಕೆ ಸದ್ಗತಿಯನ್ನು ಕಾಣಿಸಿ, ಸ್ವರ್ಗದಲ್ಲಿ ಉನ್ನತ ಸ್ಥಾನಾನ ನೀಡುವಂತೆ ಪ್ರಾರ್ಥಿಸುತ್ತೇನೆ ಎಂದು ಡಾ.ಕೆ ರಹ್ಮಾನ್ ಖಾನ್ ಸಂತಾಪ ಸೂಚಿಸಿದ್ದಾರೆ.
‘ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರು ತಮ್ಮದೆ ಆದ ಅಪರೂಪದ ನಡವಳಿಕೆಯನ್ನು ಮೈಗೂಡಿಸಿಕೊಂಡಿದ್ದವರು. ಕರಾವಳಿಯವರು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ರಾಜಕಾರಣದಲ್ಲಿ ಮೌಲ್ಯ ಕುಸಿಯುತ್ತಿರುವ ವೇಳೆಯಲ್ಲಿಯೆ ಇವರನ್ನು ಕಳೆದುಕೊಂಡಿರುವುದು ನೋವು ತಂದಿದೆ ಎಂದು ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಂತಾಪ ವ್ಯಕ್ತಪಡಿಸಿದ್ದಾರೆ.