ಮಾಜಿ ಸಚಿವ ಬಿ.ಎ.ಮೊಹಿದಿನ್ ನಿಧನ: ಉಳ್ಳಾಲ ದರ್ಗಾ ಸಮಿತಿ, ಮೀನುಗಾರರ ಸಂಘ ಸಂತಾಪ
ಗಣ್ಯರು, ಸಂಘಸಂಸ್ಥೆಗಳಿಂದ ಸಂತಾಪ
ಉಳ್ಳಾಲ, ಜು. 10: ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್ ಅವರ ನಿಧನಕ್ಕೆ ಉಳ್ಳಾಲ ದರ್ಗಾ ಸಮಿತಿ ಸಂತಾಪ ವ್ಯಕ್ತಪಡಿಸಿದೆ.
ಜಿಲ್ಲೆಯ ಹಿರಿಯ ಮುತ್ಸದ್ದಿ, ದೇಶ್ಯಾದ್ಯಂತ ಚಿರಪರಿಚಿತರಾಗಿರುವ ಶಿಕ್ಷಣ ಸಚಿವರಾಗಿ ಕರ್ನಾಟಕ ಎಲ್ಲಾ ಭಾಗಗಳಲ್ಲಿ ಶೈಕ್ಷಣಿಕವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಅದರಲ್ಲೂ ದ.ಕ.ಜಿಲ್ಲೆಯಲ್ಲಿರುವ ಎಲ್ಲಾ ವಿದ್ಯಾಸಂಸ್ಥೆಗಳೊಂದಿಗೆ ಸಹಕರಿಸಿ ಶಿಕ್ಷಣ ಕ್ರಾಂತಿಗೆ ಕಾರಣರಾಗಿದ್ದರು. ಸಚಿವರಾಗಿದ್ದರೂ ಧಾರ್ಮಿಕತೆಯಲ್ಲಿ ಅಗ್ರಪಂತಿಯಲ್ಲಿದ್ದು ಸರ್ವಜನರ ಪ್ರೀತಿಗೆ ಬಾಜನರಾದಂತಹ ಬಿ.ಎಂ.ಮೊಹಿದಿನ್ ಅವರ ನಿಧನ ಜಿಲ್ಲೆಯ ಎಲ್ಲಾ ವರ್ಗದ ಜನರು ದುಖಃ ತೃಪ್ತರಾಗುವಂತೆ ಮಾಡಿದೆ ಎಂದು ನಿಧನಕ್ಕೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಸಂತಾಪ ಸೂಚಿಸಿದ್ದಾರೆ.
ಮೀನುಗಾರರ ಸಂಘ ಸಂತಾಪ
ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್ ಅವರ ನಿಧನಕ್ಕೆ ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಸಹಕಾರ ಸಂಘ ಉತ್ತರ ಧಕ್ಕೆ ಸಂತಾಪ ವ್ಯಕ್ತಪಡಿಸಿದೆ.
ಶಿಕ್ಷಣ ಸಚಿವರಾಗಿದ್ದ ಸಂದರ್ಭ ಹಿಂದುಳಿದ ಹಾಗೂ ಬಡವರ್ಗದ ಮಕ್ಕಳೂ ಸುಶಿಕ್ಷಿತರಾಗಬೇಕು ಎಂದು ಬಯಸಿದ್ದ ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವವರಿಗೆ ತಮ್ಮಿಂದಾಗುತ್ತಿದ್ದ ಎಲ್ಲ ರೀತಿಯ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದರು. ದ.ಕ.ಜಿಲ್ಲೆಯಲ್ಲೂ ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ಸಹಕರಿಸಿದ್ದರು. ಶಾಂತಿ, ಸಾಮರಸ್ಯಕ್ಕೆ ಆದ್ಯತೆ ನೀಡಿದ್ದ ಅವರು, ಸರ್ವ ಧರ್ಮೀಯರ ಪ್ರೀತಿಗೆ ಪಾತ್ರರಾಗಿದ್ದರು. ಅವರ ನಿಧನ ಶಿಕ್ಷಣ, ರಾಜಕೀಯ, ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಸಹಕಾರ ಸಂಘದ ಪರವಾಗಿ ಅಧ್ಯಕ್ಷ ಜೆ.ಮಹಮ್ಮದ್ ಇಸಾಕ್ ಹಾಗೂ ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರ ಸಂತಾಪ
ರಾಜ್ಯ ರಾಜಕೀಯ ಹಿರಿಯ ಮುತ್ಸದ್ದಿ , ಸಮಾಜವಾದಿ ಹಾಗೂ ಮಾಜಿ ಸಚಿವ ಬಿ.ಎ. ಮೊಹಿದಿನ್ ನಿಧನಕ್ಕೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಮೋನು ಕನಚೂರು ಸಂತಾಪ ಸೂಚಿಸಿದ್ದಾರೆ.
ರಾಜ್ಯವು ಒಬ್ಬ ಹಿರಿಯ ಮುತ್ಸದ್ದಿಯನ್ನು ಕಳೆದುಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಸಂತಾಪ
ಮಾಜಿ ಸಚಿವ ಬಿ.ಎ ಮೊಹಿದಿನ್ ರಾಜ್ಯ ಕಂಡ ಅಪರೂಪದ ಹಾಗೂ ನಿಷ್ಠಳಂಕ ರಾಜಕಾರಣಿಯಾಗಿದ್ದು, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದರು. ಅವರ ಅಗಲುವಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ರಾಜ್ಯ ಜನತೆಗೆ ತುಂಬಲಾರದ ನಷ್ಟವಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಂತಾಪ ಸೂಚಿಸಿದೆ.
ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ ಖಾದರ್, ದ.ಕ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಉಸ್ತುವಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್‌ಕುಮಾರ್, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಜೆ.ಆರ್. ಲೋಬೊ, ಶಕುಂತಲಾ ಶೆಟ್ಟಿ, ಮೊಹಿದಿನ್ ಬಾವ, ವಸಂತ ಬಂಗೇರ, ಮುಹಮ್ಮದ್ ಮಸೂದ್, ಬಿ.ಇಬ್ರಾಹೀಂ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ಜಿಪಂ ಸದಸ್ಯರಾದ ತುಂಬೆ ಚಂದ್ರಪ್ರಕಾಶ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಎನ್.ಎಸ್ ಕರೀಂ, ಕಾಂಗ್ರೆಸ್ ಕರಾವಳಿ ವಲಯ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷರಾದ ಯು.ಬಿ. ಅಬ್ದುಲ್ ಸಲೀಂ, ಅಬ್ದುಲ್ ರವೂಫ್, ಮೇಯರ್ ಭಾಸ್ಕರ್ ಕೆ, ಉಪಮೇಯರ್ ಕೆ.ಮುಹಮ್ಮದ್, ಮನಪಾ ಮುಖ್ಯಸಚೇತಕ ಶಶಿಧರ್ ಹೆಗ್ಡೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಬಲ್ಲಾಳ್, ಕವಿತಾ ಸನಿಲ್, ತಾಪಂ ಅಧ್ಯಕ್ಷರಾದ ಮುಹಮ್ಮದ್ ಮೋನು, ಚಂದ್ರಹಾಸ ಕರ್ಕೇರ, ಅಬ್ಬಾಸ್‌ಅಲಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ಮುಸ್ಲಿಮ್ ಒಕ್ಕೂಟ ಸಂತಾಪ
ದ.ಕ. ಜಿಲ್ಲೆಯ ಹಿರಿಯ ಮುತ್ಸದ್ದಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ಬಿ.ಎ ಮೊಹಿದಿನ್ ನಿಧನ ಹೊಂದಿದ್ದು, ಓರ್ವ ಧೀಮಂತ ನಾಯಕನನ್ನು ಕಳೆದು ಹೊಂಡಂತಾಗಿದೆ ಎಂದು ಮುಸ್ಲಿಮ್ ಒಕ್ಕೂಟ ಸಂತಾಪ ಸೂಚಿಸಿದೆ.
ಮೊಹಿದಿನ್ ಸೌಹಾರ್ದ ಸಿದ್ಧಾಂತದ, ನಿಷ್ಠಾವಂತ ರಾಜಕಾರಣಿಯಾಗಿದ್ದು, ಹಿಂದಿನ ಸರಕಾರಗಳಲ್ಲಿ ಹಲವು ಸ್ಥಾನಗಳನ್ನು ಅಲಂಕರಿಸಿದ್ದರು. ಮುಸ್ಲಿಮ್ ಸಮುದಾಯದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಮುಸ್ಲಿಮ್ ಒಕ್ಕೂಟ ತಿಳಿಸಿದೆ.
ಜಿಲ್ಲೆಯ ಶಾಂತಿ ಸಾಮರಸ್ಯಕ್ಕೆ ಬಿ.ಎ. ಮೊಹಿದಿನ್ ಅಪಾರವಾಗಿ ದುಡಿದಿದ್ದು, ವಿವಿಧ ಶೈಕ್ಷಣಿಕ ಸಂಸ್ಥೆಯ ಸ್ಥಾಪನೆಗೆ ಅವರು ಕಾರಣರಾಗಿದ್ದಾರೆ. ಬಿ.ಎ. ಮೊಹಿದಿನ್ ಅಗಲಿಕೆಯಿಂದಾಗಿ ರಾಜ್ಯ ಓರ್ವ ಪ್ರಬಲ ನಾಯಕನನ್ನು ಕಳೆದುಕೊಂಡಿದೆ. ಅವರ ನಿಧನಕ್ಕೆ ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಮತ್ತು ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಉಳ್ಳಾಲ ದರ್ಗಾ ಅಧ್ಯಕ್ಷರ ಸಂತಾಪ
ದ.ಕ. ಜಿಲ್ಲೆಯ ಹಿರಿಯ ಮುತ್ಸದ್ಧಿ, ಶಿಕ್ಷಣ ಕ್ರಾಂತಿಗೆ ಎಲ್ಲ ವಿದ್ಯಾಸಂಸ್ಥೆಗಳೊಂದಿಗೆ ಸಹಕರಿಸಿದ ಮೇಧಾವಿ, ಸಚಿವರಾಗಿ ಧಾರ್ಮಿಕತೆಯಲ್ಲಿ ಕೂಡ ಅಗ್ರಪಂಥಿಯಲ್ಲಿದ್ದ ಬಿ.ಎ.ಮೊಹಿದಿನ್ ನಿಧನಕ್ಕೆ ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಮೊಹಿದೀನ್ ಎಲ್ಲ ಜಾತಿ ಧರ್ಮದವರೊಂದಿಗೆ ರಾಜಕೀಯ ರಹಿತವಾಗಿ ಪ್ರೀತಿಯಿಂದ ಬೆರೆಯುತ್ತಿದ್ದ ವಾತಾವರಣವೂ ಇನ್ನೊಬ್ಬರಿಗೆ ಮಾದರಿಯಾಗಿದೆ. ಮೊಹಿದಿನ್ ಉಳ್ಳಾಲ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಮತ್ತು ದರ್ಗಾಕ್ಕೆ ಸಂಬಂಧಿಸಿದ ಸಕಲ ಕಾರ್ಯಗಳಲ್ಲಿ ಸಹಕರಿಸಿದ ಮಹಾನ್ ಚೇತನ. ಅವರ ಅಗಲಿಕೆಯಿಂದ ಅವರ ಕುಟುಂಬ ಹಾಗೂ ಸ್ನೇಹಿತ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಜಿ ಟಿ.ಎಸ್ ಅಬ್ದುಲ್ಲಾ ಸಂತಾಪ
ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಶಿಕ್ಷಣ ಸಚಿವ ಬಿ.ಎ ಮೊಹಿದಿನ್ ಅವರ ನಿಧನಕ್ಕೆ ರಾಜ್ಯ ಆಹಾರ ಜಾಗೃತಿ ಸಮೀತಿ ನಿರ್ದೇಶಕರು ಹಾಗೂದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಜಿ ಟಿ.ಯಸ್ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ.
ಅವರ ಸಮಾಜ ಸೇವೆಯನ್ನು ಸೃಷ್ಟಿಕರ್ತನು ಸ್ವೀಕರಿಸಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







