ಯಕ್ಷಗುರು ಸಂಜೀವ ಸುವರ್ಣರಿಗೆ ಅಭಿನಂದನೆ, ಪ್ರಶಸ್ತಿ ಪ್ರದಾನ

ಉಡುಪಿ, ಜು.10: ಕರಾವಳಿಯ ಯಕ್ಷಗಾನ ವಲಯದಲ್ಲಿ ‘ಗುರು’ ಎಂದೇ ಮಾನ್ಯತೆ ಪಡೆದ ಉಡುಪಿ ಯಕ್ಷಗಾನ ಕೇಂದ್ರದ ಪ್ರಾಚಾರ್ಯ ಬನ್ನಂಜೆ ಸಂಜೀವ ಸುವರ್ಣ ಅವರ ಅಭಿನಂದನೆ ಹಾಗೂ ಅವರಿಗೆ ಯಕ್ಷಗಾನ ಕಲಾರಂಗದ ವತಿಯಿಂದ ‘ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ’ ಪ್ರದಾನ ಸಮಾರಂಭ ‘ಕರುಣ ಸಂಜೀವ’ ಜು.15ರಂದು ರಾಷ್ಟ್ರೀಯ ಖ್ಯಾತಿಯ ವಿವಿಧ ರಂಗಗಳ ಕಲಾವಿದರ ಭಾಗವಹಿಸುವಿಕೆಯೊಂದಿಗೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಗುರು ಬನ್ನಂಜೆ ಸಂಜೀವ ಸುವರ್ಣ ಅಭಿನಂದನ ಸಮಿತಿಯ ಅಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಾ. ಕುಮಾರ್, ಕಡುಬಡತನದಿಂದಾಗಿ ಕೇವಲ ಎರಡನೇ ತರಗತಿಯವರೆಗೆ ಮಾತ್ರ ಕಲಿತ ಸಂಜೀವ ಸುವರ್ಣ ಮುಂದೆ ಬದುಕೆಂಬ ರಂಗಸ್ಥಳದಲ್ಲಿ ಕಲಿತು ಇಂದು ವಿಶ್ವ ಖ್ಯಾತಿಯ ಕಲಾವಿದರಿಗೂ ಸರಿಮಿಗಿಲಾಗಿ ಜನಪ್ರಿಯತೆ ಹಾಗೂ ಮಾನ್ಯತೆ ಪಡೆದಿದ್ದಾರೆ ಎಂದರು.
ಸಣ್ಣ ಪ್ರಾಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾಗಿ 20ಕ್ಕಿಂತಲೂ ಅಧಿಕ ಗುರುಗಳಿಂದ ಯಕ್ಷಗಾನ ಕಲಿತು 18 ವರ್ಷಗಳ ಕಾಲ ಕೋಟ ಶಿವರಾಮ ಕಾರಂತರಿಗೆ ನಿಕಟರಾಗಿ ಅವರ ಪ್ರಯೋಗ ತಂಡದಲ್ಲಿದ್ದು, ಕೆಲಸಮಯ ಬಿ.ವಿ.ಕಾರಂತರ ಒಡನಾಡಿಯಾಗಿ, ಮಾಯಾರಾವ್‌ರಿಂದ ಕೋರಿಯೊಗ್ರಫಿ ಕಲಿತು ಅಮೆರಿಕ, ಇಂಗ್ಲೆಂಡ್, ಇಟಲಿ, ರಶ್ಯ, ಫ್ರಾನ್ಸ್, ಸಿಂಗಾಪುರ ಸೇರಿದಂತೆ 40ಕ್ಕೂ ಅಧಿಕ ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ, ರಾಷ್ಚ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿದ ಖ್ಯಾತಿ ಇವರಿಗಿದೆ ಎಂದರು.
ಜು.15ರಂದು ಬೆಳಗ್ಗೆ 9:30ರಿಂದ ಸಂಜೆ 7 ರವರೆಗೆ ಇಡೀ ದಿನ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯುವ ‘ಕರುಣ ಸಂಜೀವ’ವನ್ನು ಶತಾಯುಷಿ ಜಾನಪದ ಕಲಾವಿದ ಗುರುವ ಕೊರಗ ಹಿರಿಯಡಕ ಅವರು ವಿಶಿಷ್ಟವಾಗಿ ಉದ್ಘಾಟಿಸುವರು. ಚೆನ್ನೈನ ಕಲಾಮಂಡಲಂ ಉಷಾ ದಾತಾರ್ ಅಧ್ಯಕ್ಷತೆ ವಹಿಸುವರು ಎಂದು ಸಂಜೀವ ಸುವರ್ಣರ ಶಿಷ್ಯರಾದ ಹಿರಿಯ ಮೂಳೆತಜ್ಞ ಡಾ.ಭಾಸ್ಕರಾನಂದ ಕುಮಾರ್ ತಿಳಿಸಿದರು.
ಬೆಳಗ್ಗೆ 10 ರಿಂದ ಅಪರಾಹ್ನ 1 ಗಂಟೆಯವರೆಗೆ ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳ ಸಹಕಾರದೊಂದಿಗೆ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಲಿದೆ. ಬಳಿಕ ಹಿರಿಯಡಕ ಗೋಪಾಲ ರಾವ್ ಹಾಗೂ ಮಾರ್ಗೋಳಿ ಗೋವಿಂದ ಸೇರೆಗಾರ್‌ರಿಗೆ ಗುರುವಂದನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಕಲಾವಿದ-ಚಿಂತಕ ಟಿ.ಎಂ.ಕೃಷ್ಣ, ಕಲಾಮಂಡಲಂ ಉಷಾ ದಾತಾರ್, ಕಲಾವಿಮರ್ಶಕ-ಲೇಖಕ ಸದಾನಂದ ಮೆನನ್, ಚಿಂತಕ ಲಕ್ಷ್ಮೀಶ ತೋಳ್ಪಾಡಿ, ನಾಟ್ಯಶಾಸ್ತ್ರ ತಜ್ಞ ಎಂ.ಎ.ಹೆಗಡೆ, ರಂಗನಿರ್ದೇಶಕ ಚಿದಂಬರ ರಾವ್ ಜಂಬೆ, ಮಹಾರಾಷ್ಟ್ರದ ವಿಜಯಕುಮಾರ್ ಪಾತೆರ್ಪಕರ್, ಒಡಿಸ್ಸಿ ನೃತ್ಯ ಕಲಾವಿದೆ, ಡಾ.ಕಾರಂತರ ಪುತ್ರಿ ಕ್ಷಮಾ ರಾವ್, ಕೊರಗ ಪಾಣಾರ, ಕೇರಳ ತಯ್ಯಂ ಕಲಾ ತಜ್ಞ ವಿ.ಜಯರಾಮನ್, ಮಾಧವ ಚಿಪ್ಪಳ್ಳಿ ಪಾಲ್ಗೊಳ್ಳುವರು.
ಅಪರಾಹ್ನದ ಬಳಿಕ ಖ್ಯಾತ ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರು ಇವರಿಂದ ‘ಕರುಣ ಸಂಜೀವ’ ಏಕವ್ಯಕ್ತಿ ನಾಟಕ ಪ್ರದರ್ಶನ, ಅಭಯಸಿಂಹ ನಿರ್ದೇಶನದ ‘ಕರುಣ ಸಂಜೀವ’ ಸಾಕ್ಷಚಿತ್ರ ಪ್ರದರ್ಶನ ಹಾಗೂ ಬನ್ನಂಜೆ ಅವರ ಶಿಷ್ಯೆ ಜರ್ಮನಿ ಕತ್ರೀನ್ ಬೈಂದರ್ ಅವರೊಂದಿಗೆ ಸಂಸ್ಕೃತಿ ಚಿಂತಕ ಎ. ನಾರಾಯಣ ನಡೆಸುವ ಸಂವಾದ, ಪ್ರಾತ್ಯಕ್ಷಿಕೆ ನಡೆಯಲಿದೆ.
ಸಂಜೆ 4ರಿಂದ ಬನ್ನಂಜೆ ಸಂಜೀವ ಸುವರ್ಣರಿಗೆ ಯಕ್ಷಗಾನ ಕಲಾರಂಗದ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯೊಂದಿಗೆ 40,000 ರೂ.ಗಳ ನಗದು ಪ್ರದಾನ ಮಾಡಲಾಗುವುದು. ಅಲ್ಲದೇ ಕಾರ್ಯಕ್ರಮದಂಗವಾಗಿ ‘ಸಮ್ಮಾನ ನಿಧಿ’ಯನ್ನು ಅರ್ಪಿಸಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬನ್ನಂಜೆ ಗೋವಿಂದಾಚಾರ್ಯ ವಹಿಸಲಿದ್ದು, ಪ್ರಜಾವಾಣಿ ಸಂಪಾದಕ ಕೆ.ಎನ್. ಶಾಂತಕುಮಾರ್ ಸಂಮಾನಿಸಿ, ಕ್ಷಮಾ ರಾವ್ ಅಭಿನಂದಿಸುವರು.
ಕೊನೆಯಲ್ಲಿ ಸಂಜೆ 5 ರಿಂದ ಖ್ಯಾತ ಶಾಸ್ತ್ರೀಯ ಸಂಗೀತಗಾರ ಹಾಗೂ ಚಿಂತಕ ಟಿ.ಎಂ.ಕೃಷ್ಣ ಅವರಿಂದ ಕರ್ನಾಟಕ ಸಂಗೀತ ಕಚೇರಿ ನಡೆಯಲಿದೆ ಎಂದು ಡಾ.ಕುಮಾರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಡಾ.ಪ್ರಶಾಂತ್ ಶೆಟ್ಟಿ, ವಿದ್ಯಾಪ್ರಸಾದ್, ಕಲಾರಂಗದ ಕೆ.ಗಣೇಶ ರಾವ್, ತಲ್ಲೂರು ಶಿವರಾಮ ಶೆಟ್ಟಿ, ಮುರಳಿ ಕಡೆಕಾರ್, ಕೆ.ಮನೋಹರ್, ಎಸ್.ವಿ. ಭಟ್ ಉಪಸ್ಥಿತರಿದ್ದರು.







